ಬೆಂಗಳೂರು/ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಶಾಸಕ ಎಂ. ಪಿ ಕುಮಾರಸ್ವಾಮಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಇದಕ್ಕೆ ಶಾಸಕರೇ ಖುದ್ದಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಗುರುವಾರ ರಾತ್ರಿ 11 ಗಂಟೆಯ ಸಮಯದಲ್ಲಿ ಶಾಸಕರ ಭವನದಲ್ಲಿ ಈ  ಘಟನೆ ನಡೆದಿದ್ದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ ಪೋಲಿಸ್ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗೆ ಎಂ. ಪಿ ಕುಮಾರಸ್ವಾಮಿ ಶಾಸಕ ಎಂದು ತಿಳಿಯದ ಆತ ಶಾಸಕರು ಶಾಸಕ ಭವನಕ್ಕೆ ತೆರಳುವ ಗೇಟ್ ಬಳಿ ಬಂದಾಗ ಪೊಲೀಸ್ ಸಿಬ್ಬಂದಿ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದ ಆದ್ದರಿಂದ ಶಾಸಕರ ಕಾರು ಒಳ ಹೋಗಲು ಆಗಿರಲಿಲ್ಲ, ಸ್ವಲ್ಪ ಸಮಯದ ನಂತರ ಶಾಸಕರೇ ಕಾರಿನಿಂದ ಇಳಿದುಹೋಗಿ ಸಿಬ್ಬಂದಿಯನ್ನು ಕಾರನ್ನು ತೆಗಿಯುವಂತೆ ಹೇಳಿದರೂ ಈ ವೇಳೆ ಸಿಬ್ಬಂದಿ ಯಾರಿಗೋ ಕರೆ ಮಾಡಿ ಮಾತನಾಡುತ್ತಾ ನಿರ್ಲಕ್ಷ ಮಾಡಿದ್ದಾನೆ, ಮತ್ತೆ ಕಾರನ್ನು ತೆಗೆಯಲು ಹೇಳಿದಾಗ ಆತ ಫೋಟೋವನ್ನು ತೆಗೆದುಕೊಳ್ಳಲು ಶುರು ಮಾಡಿದ್ದಾನೆ. ಈ ವೇಳೆ ಶಾಸಕರು ಅವರ ಬಳಿಯಿಂದ ಮೊಬೈಲ್ ನನ್ನು ತೆಗೆದುಕೊಂಡಿದ್ದಾರೆ. ಇದರಿಂದ ಹೊಯ್ಸಳ ಸಿಬ್ಬಂದಿ ಕೋಪಗೊಂಡು ಶಾಸಕರ ಮೇಲೆ ಕೈ ಮಾಡಿರುವುದಾಗಿ ತಿಳಿದುಬಂದಿದ್ದು ಅನಂತರ ಡಿ ಸಿ ಪಿ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಬಂದು ಆತನಿಗೆ ತಿಳಿಹೇಳಿರುವುದಾಗಿ ಎಂ. ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಘಟನೆಯ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:

ಈ ಘಟನೆಯ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಶಾಸಕರು ಹೋಗುವ ಜಾಗದಲ್ಲಿ ಹೊಯ್ಸಳ ಪೊಲೀಸರು ವಾಹನವನ್ನು ನಿಲ್ಲಿಸಿದ್ದರು, ಈ ವೇಳೆ ಶಾಸಕರು ಮುಂದೆ ಹೋಗಲು ಸಾಧ್ಯವಾಗದ ಕಾರಣ ಕಾರಿನಿಂದ ಇಳಿದು ಸಿಬ್ಬಂದಿಗೆ ಗಾಡಿಯನ್ನು ಹಿಂದೆ ತೆಗೆದುಕೊಳ್ಳಲು ಹೇಳಿದ್ದಾರೆ ಆದರೆ ಆತ ನಿರ್ಲಕ್ಷ ತೋರಿಸಿದ ಕಾರಣ ಶಾಸಕರು ಮತ್ತು ಪೊಲೀಸ್ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಆತ ಎಂ. ಪಿ ಕುಮಾರಸ್ವಾಮಿ ಶಾಸಕ ಎಂದು ತಿಳಿಯದೇ ವಾದ ಮಾಡಿದ್ದಾನೆ, ಅನಂತರ ಅಧಿಕಾರಿಗಳು ಬಂದು ಹೊಯ್ಸಳ ಸಿಬ್ಬಂದಿಗೆ ತಿಳಿಹೇಳಿದ್ದು ಸಮಸ್ಯೆ ಇತ್ಯರ್ಥವಾಗಿದೆ ಎಂದು ಹೇಳಿದರು.