ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಎಲ್ಲೆಂದರಲ್ಲಿ ಜೆಸಿಬಿ ಘರ್ಜನೆ ಕಂಡುಬರುತ್ತಿದ್ದು ಸಂಬಂಧ ಪಟ್ಟ ಇಲಾಖೆಯವರು ತಮಗೆ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಅರಣ್ಯ ನಾಶ ತಡೆಗಟ್ಟಿ ಕಾನೂನು ಕ್ರಮಕ್ಕೆ ಕೈಗೊಳ್ಳಬೇಕು, ತಪ್ಪಿದ್ದಲ್ಲಿ ಮಡಿಕೇರಿ ಅತಿವೃಷ್ಟಿ ಸಮಯದಲ್ಲಿ ಆದ ದುರಂತದ ವಾತಾವರಣ ಮುಂದೆ ಇಲ್ಲಿಯೂ ಬರಬಹುದು ಎಂದು ಪರಿಸರಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.


"ಶೃಂಗೇರಿಗೆ ಯಾಕೋ ಇತ್ತೀಚಿನ ದಿನಗಳಲ್ಲಿ ಹಗರಣಗಳ ಸರಮಾಲೆಯ ಅಪಕೀರ್ತಿ ಅಂಟಿಕೊಳ್ಳುತ್ತಿರುವುದು ದುರದೃಷ್ಟವೇ ಸರಿ. ಸೂಕ್ಷ್ಮ ಪರಿಸರವೊಂದು ನಾಶವಾಗುತ್ತಿದ್ದರೆ ಗ್ರಾಮ ಪಂಚಾಯತ್ ಇಂದ ಜಿಲ್ಲಾ ಆಡಳಿತದಲ್ಲಿರುವರೆಗೂ ಹಗಲುಕುರುಡು ಮೈಗಂಟಿದಂತಿದೆ.

ಮಲ್ಲಪ್ಪನ ಬೆಟ್ಟ, ಪಿರಂಗಿ ಗುಡ್ಡ, ತಾಲೂಕು ಕಚೇರಿ, ನ್ಯಾಯಾಲಯ ಕಟ್ಟಡ, ಮಾರುತಿ ಬೆಟ್ಟದ ಸುತ್ತಲೂ ಜೆಸಿಬಿಗಳ ಸದ್ದು ಅಧಿಕಾರಿಗಳ ಕಿವಿಗೇ ಬೀಳುತ್ತಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಮಡಿಕೇರಿ ಜಿಲ್ಲೆಯಲ್ಲಾದ ಅನಾಹುತ ಶೃಂಗೇರಿಯಲ್ಲಿ ನೋಡುವ ದೌರ್ಭಾಗ್ಯ ನಮಗೆಲ್ಲ ಇದೆ. ಇವೆಲ್ಲದರ ನಡುವೆ ಶೃಂಗೇರಿಯ ತುಂಗಾ ನದಿಯ ದಡದಲ್ಲಿ ಇರುವ ಕಲ್ಕಟ್ಕೆ ಗ್ರಾಮಕ್ಕೆ ಸೇರಿದ ಸೂರ್ಯ ದೇವಸ್ಥಾನದ ಪರಿಸರ ಅತೀ ಸೂಕ್ಷ್ಮ ಜೀವ ರಾಶಿಯ, ಹಾವು, ನವಿಲು, ಕಾಡು ಕುರಿಗಳ ಆವಸ ಸ್ಥಾನಕ್ಕೆ ಜೆಸಿಬಿಯನ್ನು ಬಿಟ್ಟು ನೆಲಸಮ ಮಾಡುತಿದ್ದಾರೆ. ಹಾಗೆಯೇ ಮಣ್ಣನ್ನು ತುಂಗಾ ನದಿಗೆ ಬಿಟ್ಟು ವಿರೂಪಗೊಳಿಸಲಾಗುತ್ತಿದೆ. ಅವೈಜ್ಞಾನಿಕ ಅಭಿವೃದ್ದಿಯ ಹೆಸರಲ್ಲಿ ಪರಿಸರ ನಾಶವಾಗುತ್ತಿರುವ ವಿಷಯ ಹೃದಯ ವಿದ್ರಾವಕ ಘಟನೆಯಾಗಿದ್ದು. ಪರಿಸರ ಪ್ರೇಮಿಗಳು ಒಳಗನ್ನ ತೆರೆಯದಿದ್ದರೆ, ಪ್ರತಿಭಟಿಸದಿದ್ದರೆ, ಮುಂದಿನ ದಿನಗಳಲ್ಲಿ ಶೃಂಗೇರಿಯ ಸೌಂದರ್ಯಕ್ಕೆ, ಭದ್ರತೆಗೆ ದಕ್ಕೆಯಾಗುತ್ತದೆ" ಎಂದು ಟಿ.ಸಿ ರಾಜೇಂದ್ರ ಹೇಳಿದ್ದಾರೆ ಹಾಗೂ ಪರಿಸರಾಸಕ್ತರು ಸಹ ಧ್ವನಿಗೂಡಿಸಿದ್ದು ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ರಸ್ತೆ ವೈಂಡಿಂಗ್ ಮಾಡುವ ಸಲುವಾಗಿ ಮಣ್ಣನ್ನು ತೆಗೆಯಲಾಗಿದೆ, ಯಾವುದೇ ಮರಗಳನ್ನು ಕಡಿದಿಲ್ಲ ಈ ಕುರಿತು ದಾಖಲೆಗಳನ್ನು ತರಲು ಈಗಾಗಲೇ ಸೂಚಿಸಲಾಗಿದೆ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ನಂತರದಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ. -ಸಂಪತ್ ಕುಮಾರ್ ವಲಯ ಅರಣ್ಯಾಧಿಕಾರಿ ಶೃಂಗೇರಿ

ಇದನ್ನೂ ಓದಿ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಹರಿಬಿಟ್ಟಿದ್ದ ಕಾಮುಕರು ಅರೆಸ್ಟ್