ಚಿಕ್ಕಮಗಳೂರು/ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಸೀಲ್ದಾರ್ ಅಂಬುಜಾ ಹಾಗೂ ಶೃಂಗೇರಿಯ ನೆಮ್ಮಾರು ಪಂಚಾಯಿತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ಇಬ್ಬರನ್ನೂ ಹಕ್ಕುಪತ್ರ ಹಗರಣ ಸಂಬಂಧ ಎಸಿಬಿ ಬಂಧಿಸಿದೆ.

ಶೃಂಗೇರಿಯ ಕಾವಡಿ ವಾಸಿ ಸಂಜಯ್ ಕುಮಾರ್ ಎಂಬುವವರ ದೂರಿನ ಅನ್ವಯ ಎಸಿಬಿ ದಾಳಿ ನಡೆಸಿದ್ದು, ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಸಿದ್ದಪ್ಪ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ನಂತರ ತಹಸೀಲ್ದಾರ್ ಅಂಬುಜಾರನ್ನು ತನಿಖೆಗೆ ಒಳಪಡಿಸಲಾಗಿತ್ತು, ತನಿಖೆಯ ಆಧಾರದ ಮೇಲೆ ಈಗ ಇಬ್ಬರನ್ನೂ ಬಂಧಿಸಲಾಗಿದೆ.

ಕಳೆದ ಎರಡು ತಿಂಗಳಿನಿಂದ ಹಕ್ಕು ಪತ್ರ ಹಗರಣ ಸಾಕಷ್ಟು ಸುದ್ದಿಯಲ್ಲಿತ್ತು.

ಹಿನ್ನೆಲೆ: ದಿನಾಂಕ 04.01.2022ರಂದು ಸಂಜಯ್ ಅವರು ತಾಲೂಕು ಕಛೇರಿಗೆ ತೆರಳಿ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಮನೆಯ ಹಕ್ಕುಪತ್ರ ಮಾಡಿಕೊಡುವಂತೆ ಕೇಳುತ್ತಾರೆ, ತಹಸೀಲ್ದಾರ್ ರು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಅವರಿಂದ ದಾಖಲೆಗಳನ್ನು ತಯಾರಿಸಿಕೊಂಡು ಬರಲು ಹೇಳುತ್ತಾರೆ. ಆದರೆ ಸಿದ್ದಪ್ಪ ಹಕ್ಕುಪತ್ರ ನೀಡಲು ಮುಂಗಡ 30 ಸಾವಿರ ಹಾಗೂ ನಂತರ 30 ಸಾವಿರ ಒಟ್ಟು 60 ಸಾವಿರ ಆಗುವುದಾಗಿ ತಿಳಿಸಿದ್ದಾರೆ. ಸಂಜಯ್ ಅವರಿಗೆ ಹಣ ನೀಡಿ ಹಕ್ಕುಪತ್ರ ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ಕುರಿತು ಎಸಿಬಿಗೆ ದೂರು ನೀಡಿದ್ದರು.

ಇಂದು ಬೆಳಿಗ್ಗೆ ಶೃಂಗೇರಿಯ ನೀರೀಕ್ಷಣಾ ಮಂದಿರದಲ್ಲಿ 25 ಸಾವಿರ ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ನನ್ನು ಬಂಧಿಸಲಾಗಿದೆ. ಕೆಲವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ತಹಸೀಲ್ದಾರ್ ರನ್ನು ತನಿಖೆಗೆ ಒಳಪಡಿಸಿ ಆ ನಂತರ ಅವರನ್ನೂ ಬಂಧಿಸಲಾಗಿದೆ.

ತಿಮಿಂಗಿಲಗಳೇ ಬಚಾವ್: ಆದರೆ ಇದರಲ್ಲಿ ನಿಜವಾಗಿಯೂ ಬಡವರ ರಕ್ತ ಹೀರಿದ ಬಹುದೊಡ್ಡ ತಿಮಿಂಗಿಲಗಳೇ ಬಚಾವ್ ಆಗಿದ್ದು, ಅವುಗಳನ್ನೂ ಹಿಡಿಯುತ್ತಾರಾ ಕಾದುನೋಡಬೇಕಿದೆ. ಶೃಂಗೇರಿಯಲ್ಲಿ ತಹಸೀಲ್ದಾರ್ ರ ಕಣ್ಣುತಪ್ಪಿಸಿ ಅವರ ನಕಲಿ ಸಹಿ, ಹಾಗೂ ಸೀಲ್ ಬಳಸಿ ನೂರಕ್ಕೂ ಅಧಿಕ ಹಕ್ಕುಪತ್ರಗಳನ್ನು ನೀಡಿರುವ ಮಾಹಿತಿ ಇದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ತಿಮಿಂಗಿಲಗಳ ಮೂಲಕ ಹಕ್ಕು ಪತ್ರ ಮಾಡಿಸಿಕೊಂಡಿರುವ ಬಡವರಿಗೆ ನ್ಯಾಯ ಒದಗಿಸಬೇಕಿದೆ