ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಬೆಳಕಿಗೆ ಬಂದಿದೆ.

ನರಸಿಂಹರಾಜಪುರ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿಗೆ ಅದೇ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭು ನಾಯ್ಕ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಿಇಒ ದುರುಗಪ್ಪ ಶಿಕ್ಷಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಶಾಲೆಗೆ ಆಗಮಿಸಿದ ಎಎಸ್ಪಿ ಶೃತಿ ಅವರ ತನಿಖಾ ತಂಡ ಭಾನುವಾರ ಸಂಪೂರ್ಣವಾದ ಮಾಹಿತಿ ಕಲೆ ಹಾಕಿದೆ. 

ಘಟನೆ ನಡೆದು ಸುಮಾರು ಹದಿಮೂರು ದಿನಗಳ ನಂತರದಲ್ಲಿ ಈ ಕುರಿತು ದೂರು ದಾಖಲಾಗಿದ್ದು ಘಟನೆಯನ್ನು ಗಮನಿಸಿದ ಇನ್ನೋರ್ವ ಶಿಕ್ಷಕ ಶಾಲಾ ಎಸ್.ಡಿ.ಎಂ.ಸಿ ಸದಸ್ಯರಿಗೆ ಈ ಕುರಿತು ವಿಚಾರ ತಿಳಿಸಿದ್ದಾರೆ ನಂತರದಲ್ಲಿ ಈ ಕುರಿತು ಸಭೆ ನಡೆಸಿದ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಶಿಕ್ಷಕನ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಹಿಂದೆಯೂ ಕೂಡ ಶಿಕ್ಷಕ ಈ ರೀತಿಯ ದುಷ್ಕೃತ್ಯ ಎಸಗಿದ್ದ ಆದರೆ ಶಾಲೆಯ ಗೌರವದ ಸಲುವಾಗಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ ಆದರೆ ಅದನ್ನೇ ಸಲೀಸಾಗಿ ತೆಗೆದುಕೊಂಡ ಶಿಕ್ಷಕ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ. ಆರೋಪಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಈ ಸಂಬಂಧ ಹೆಚ್ಚಿನ ತನಿಖೆ ಈಗಾಗಲೇ ಎಎಸ್ಪಿ ಶೃತಿ ನೇತೃತ್ವದಲ್ಲಿ ನಡೆಯುತ್ತಿದೆ ಆರೋಪಿ ಶಿಕ್ಷಕನು ತಲೆ ಮರೆಸಿಕೊಂಡಿದ್ದು ಆತನನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಕಾರ್ಯಾರಂಭಿಸಿದ್ದಾರೆ. 

ಘಟನಾ ಸಂಬಂಧ ಮಾಹಿತಿ ನೀಡಿರುವ ಎಸ್ಪಿ ಅಕ್ಷಯ್ ಎಂ.ಹೆಚ್ ಆರೋಪಿ ಶಿಕ್ಷಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲುಮಾಡಲಾಗಿದೆ, ಶಿಕ್ಷೆಯ ಜೊತೆಗೆ ನೊಂದವರ ಪಾಲಿಗೆ ಬೆಳಕಾಗುವುದು ಹಾಗೂ ಅವರ ನೋವಿನ ಶಮನಮಾಡುವುದು ಅಷ್ಟೇ ಅಗತ್ಯ ಈ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಹಾಗೂ ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕಾಗಿ ನ್ಯಾಯ ದೊರಕಿಸಲಾಗುವುದು ಎಂದರು. 

ಬಿಇಒ ವಿರುದ್ಧ ಪೋಷಕರ ಆಕ್ರೋಶ :

ಘಟನೆ ನಡೆದು ಸುಮಾರು ಹದಿಮೂರು ದಿನಗಳು ಕಳೆದ ನಂತರದಲ್ಲಿ ದೂರು ನೀಡಿರುವುದು ಸರಿಯಲ್ಲ ತಪ್ಪಿತಸ್ಥ ಶಿಕ್ಷಕನ ಮೇಲೆ ಅಂದೇ ದೂರು ದಾಖಲು ಮಾಡಬೇಕಿತ್ತು ಈ ರೀತಿಯ ಬೆಳವಣಿಗೆ ಸರಿಯಲ್ಲ ದೈಹಿಕ ಶಿಕ್ಷಕ ಪ್ರಭು ನಾಯ್ಕನ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.