ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಭಾಗದಲ್ಲಿ ಅನೇಕರಿಗೆ ಉದ್ಯೋಗ ಸೃಷ್ಟಿ ಮಾಡಿ ಜೀವನ ನಿರ್ವಹಿಸಲು ಸಹಾಯ ಮಾಡಿದ್ದ ವಿ.ಜಿ ಸಿದ್ದಾರ್ಥ್ ಹೆಗ್ಗಡೆ ಅವರಿಗೆ ವಿಶಿಷ್ಟವಾಗಿ ವ್ಯಕ್ತಿಯೋರ್ವರು ನಮನ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡ್ನಳ್ಳಿ ಸಮೀಪದ ಹೊಳೆಕೊಡಿಗೆಯ ಸಂತೋಷ್ ಎಂಬುವವರು ತಮ್ಮ ವಿವಾಹದ ಸಂದರ್ಭದಲ್ಲಿ ನಡೆಸುವ ಮದರಂಗಿ ಶಾಸ್ತ್ರದಲ್ಲಿ ವೇದಿಕೆಯ ಮೇಲೆ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರ ಭಾವಚಿತ್ರವನ್ನು ಇಟ್ಟು ಪುಷ್ಪನಮನ ಹಾಗೂ ನುಡಿನಮನವನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ :ಕಾಫಿನಾಡಿನಲ್ಲಿ ಮರುಕಳಿಸಿದ ಹುಲಿ ದಾಳಿ; ಆತಂಕದಲ್ಲಿ ಸ್ಥಳೀಯರು

ಸಂತೋಷ್ ಹಾಗೂ ಪ್ರಮೀತ ಜೋಡಿಯ ವಿವಾಹದ ಸಂದರ್ಭದಲ್ಲಿ ಈ ರೀತಿಯಾಗಿ ತಮಗೆ ಉದ್ಯೋಗವನ್ನು ನೀಡಿದ ಉದ್ಯೋಗದಾತ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರನ್ನು ನೆನೆದ ವರ ಸಂತೋಷ್ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ನನಗೆ ಸಿದ್ದಾರ್ಥ್ ಹೆಗ್ಡೆ ಅವರು ಉದ್ಯೋಗ ನೀಡಿ ಉತ್ತಮ ಜೀವನ ನಡೆಸಲು ತುಂಬಲಾರದ ಸಹಾಯ ಮಾಡಿದ್ದಾರೆ. ಅವರಿಂದಾಗಿ ನನಗೆ ಜೀವನ ನಡೆಸಲು ಒಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರ ದೊರೆಯಿತು ಅವರನ್ನು ಎಂದಿಗೂ ಮರೆಯಲಾಗದು ನನ್ನಂತೆ ಅನೇಕರು ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರ ಋಣದಲ್ಲಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಅನೇಕರು ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಲ್ಲಿಸಿದರು ಹಾಗೂ ನುಡಿನಮನ ಸಲ್ಲಿಸಿದರು. ಮನುಷ್ಯ ಸತ್ತರೂ ಆತನ ಉತ್ತಮ ಕಾರ್ಯಗಳು ಎಂದಿಗೂ ಸಾಯಲಾರವು ಎಂಬುದಕ್ಕೆ ಉದಾಹರಣೆ ನಮ್ಮ ಸಿದ್ದಾರ್ಥ್ ಹೆಗ್ಡೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಅನೇಕರು ನುಡಿದರು.