ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಸೀಲ್ದಾರ್ ಅಂಬುಜಾ ಹಾಗೂ ಶೃಂಗೇರಿಯ ನೆಮ್ಮಾರು ಪಂಚಾಯಿತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ಇಬ್ಬರನ್ನೂ ಹಕ್ಕುಪತ್ರ ಹಗರಣ ಸಂಬಂಧ ಲಂಚ ಪಡೆಯುವಾಗ ಎಸಿಬಿ ಬಂಧಿಸಿತ್ತು.
ಶೃಂಗೇರಿಯ ಕಾವಡಿ ವಾಸಿ ಸಂಜಯ್ ಕುಮಾರ್ ಎಂಬುವವರ ದೂರಿನ ಅನ್ವಯ ಎಸಿಬಿ ದಾಳಿ ನಡೆಸಿದ್ದು, ಸುಮಾರು 25 ಸಾವಿರ ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಸಿದ್ದಪ್ಪ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ನಂತರ ಆಡಿಯೋ ರೆಕಾರ್ಡ್ ನ ಆಧಾರದ ಮೇಲೆ ತಹಸೀಲ್ದಾರ್ ಅಂಬುಜಾರನ್ನು ತನಿಖೆಗೆ ಒಳಪಡಿಸಲಾಗಿತ್ತು, ತನಿಖೆಯ ಆಧಾರದ ಮೇಲೆ ನಂತರ ಇಬ್ಬರನ್ನೂ ಬಂಧಿಸಲಾಗಿತ್ತು.
ನೆನ್ನೆ ತಡರಾತ್ರಿವರೆಗೂ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ರಾತ್ರಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು, ನ್ಯಾಯಾಲಯವು ಜನವರಿ 20ನೇ ತಾರೀಖಿನ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದರಿಂದ ಇಬ್ಬರೂ ಜೈಲು ಪಾಲಾಗಿದ್ದರು.
ಕಾನೂನು ಎಲ್ಲರಿಗೂ ಒಂದೇ ಆಗಿದೆ, ಅಧಿಕಾರಿಗಳ ಕೆಲಸವನ್ನು ಅವರು ಮಾಡುತ್ತಾರೆ. ತಹಸೀಲ್ದಾರ್ ಅಂಬುಜಾ ಅವರು ತಪ್ಪೆಸಗಿದ್ದಲ್ಲಿ ಕಾನೂನು ಕ್ರಮ ಜರುಗಿಸಬೇಕು ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು. ಮನವಿ ನೀಡುವುದು, ಇನ್ನಿತರ ಉಳಿದ ವಿಚಾರಗಳು ಅವರವರ ವೈಯುಕ್ತಿಕವೇ ಹೊರತು ಪಕ್ಷದ ನಿಲುವಲ್ಲ. - ಡಿ.ಎನ್ ಜೀವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಈ ನಡುವೆ ನೆನ್ನೆ ರಾತ್ರಿ ಎಸಿಬಿ ಅಧಿಕಾರಿಗಳ ಎದುರು ಹೈಡ್ರಾಮವೊಂದು ನಡೆದು ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿ ಅಂಬುಜಾ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು, ಬಿಡುಗಡೆಗೊಳಿಸಬೇಕು, ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಒತ್ತಾಯಿಸಿದ್ದರು. ಆದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು.
ಇಂದು ಬೆಳಿಗ್ಗೆ 11 ಗಂಟೆಯಿಂದ ಶೃಂಗೇರಿ ತಾಲೂಕು ಕಛೇರಿ ಎದುರು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬೆಂಬಲಿಗರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು ತಹಸೀಲ್ದಾರ್ ಅಂಬುಜಾ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಯಾರೇ ಆದರೂ ಕಾನೂನಿಗೆ ತಲೆ ಬಾಗಲೇಬೇಕು. ತಹಸೀಲ್ದಾರ್ ಅಂಬುಜಾ ಅವರು ತಪ್ಪೆಸಗಿದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನಿಗೆ ಎಲ್ಲರೂ ಒಂದೇ, ನಾವು ಕಾನೂನಿನ ಪರವಾಗಿದ್ದೇವೆ. ಪ್ರತಿಭಟನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇಲೆ ಯಾರೇ ಭಾಗಿಯಾಗಿದ್ದರೂ ಅದು ಅವರವರ ವೈಯಕ್ತಿಕವಾಗಿದೆ. - ಟಿ.ಡಿ ರಾಜೇಗೌಡ, ಶಾಸಕ, ಶೃಂಗೇರಿ ವಿಧಾನಸಭಾ ಕ್ಷೇತ್ರ
ಅಂಬುಜಾ ದಿಟ್ಟ ಮಹಿಳೆಯಾಗಿದ್ದು, ಅತ್ಯಂತ ಪ್ರಾಮಾಣಿಕರು, ಅವರ ಮೇಲಿನ ಎಸಿಬಿ ದಾಳಿ ದುರುದ್ದೇಶದಿಂದ ಕೂಡಿದೆ, ದಾಳಿಯ ಮಾಹಿತಿ ಕೇಳಿ ನಮಗೇ ದಿಗ್ಭ್ರಮೆಯಾಯಿತು ಎಂದಿದ್ದಾರೆ.
ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕುಪತ್ರಗಳು ಜನರಿಗೆ ಈ ತಹಸೀಲ್ದಾರ್ ರು ನೀಡಿದ್ದರು, 53, 94ಸಿ, 94ಸಿಸಿ ಅಡಿಯಲ್ಲಿ ಕೂಲಿಕಾರ್ಮಿಕರಿಗೆ, ರೈತರಿಗೆ ಯಾವುದೇ ಲಂಚ ಪಡೆಯದೆ ಬಹಳ ಪ್ರಾಮಾಣಿಕತೆಯಿಂದ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು, ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯಗಳು ದೊರಕಬೇಕು. ಅಂತಹ ವಿಷಯದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡುವ ಮೂಲಕ ಬಡವರಿಗೆ ತೊಂದರೆ ಆಗಬಾರದು. ಜೆಡಿಎಸ್ ಪಕ್ಷವು ಈ ವಿಚಾರದಲ್ಲಿ ಪರ ಅಥವಾ ವಿರೋಧ ಇರುವುದಿಲ್ಲ, ನ್ಯಾಯದ ಪರವಾಗಿ ನಿಲ್ಲುತ್ತದೆ. ಕಾನೂನಿನ ಅಡಿಯಲ್ಲಿ ಸೂಕ್ತ ತನಿಖೆ ಆಗಲಿ, ತಪ್ಪಿದ್ದಲ್ಲಿ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಶೀಘ್ರ ಶಿಕ್ಷೆಯಾಗಲಿ. - ಸುಧಾಕರ್ ಎಸ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ, ಜೆಡಿಎಸ್
ಊರಿನ ಅಭಿವೃದ್ಧಿಗಾಗಿ ನಾವೆಲ್ಲರೂ ರಾಜಕೀಯ ಬದಿಗಿಟ್ಟು ಕೆಲಸ ಮಾಡೋಣ. ದೀನ ದಲಿತರಿಗೆ ಮನೆ ನಿರ್ಮಾಣ ಆಗಬೇಕು, ಈ ನಿಟ್ಟಿನಲ್ಲಿ ತಹಸೀಲ್ದಾರ್ ಅವರ ಪರವಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಹಾಗೇಯೇ ಸೂಕ್ತ ತನಿಖೆಯಾಗಲಿ, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ತಹಸೀಲ್ದಾರ್ ಅಂಬುಜಾ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡುವುದನ್ನು ನಾವು ಸಹಿಸುವುದಿಲ್ಲ ಎಂದರು.
ಆಫ್ ದಿ ರೆಕಾರ್ಡ್ ನಾಯಕರ ಮಾತು : ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವುದು ಸೂಕ್ತವಲ್ಲ ಎಂಬುದು ನಮ್ಮ ಹಾಗೂ ನಮ್ಮ ನಾಯಕರ ಅಭಿಪ್ರಾಯ ಸಹ ಆಗಿದೆ, ಆದರೆ ಇಂದು ಅನಿವಾರ್ಯವಾಗಿ ಭಾಗಿಯಾಗಿದ್ದೇವೆ, ಲಕ್ಷಗಟ್ಟಲೆ ಹಣ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡುವುದು ಸಹ ಒಳ್ಳೆಯ ಬೆಳವಣಿಗೆ ಅಲ್ಲ, ಈ ಕುರಿತು ಸೂಕ್ತ ತನಿಖೆಯಾಗಲಿ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರೊಬ್ಬರು ಹೇಳಿದರು.
ಬ್ರೋಕರ್ ಗಳ ಹಾವಳಿಯಿಂದ ನನ್ನ ದುಡ್ಡು ಹೋಯ್ತು : ಬಂಧಿಸಲ್ಪಟ್ಟ ಅಧಿಕಾರಿಗಳು ಬಹಳ ಪ್ರಾಮಾಣಿಕರು ಎಂದು ಗುಣಗಾನ ಮಾಡುವ ನಡುವೆಯೇ, ಬ್ರೋಕರ್ ಗಳ ಹಾವಳಿಯಿಂದ ನನ್ನ ದುಡ್ಡು ಹೋಯ್ತು ಎಂದು ಪ್ರತಿಭಟನೆಯಲ್ಲಿದ್ದವರೊಬ್ಬರು ನೋವನ್ನು ತೋಡಿಕೊಂಡರು.

0 Comments