ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕೊಡಗಿನಲ್ಲಿ ಹುಲಿ ದಾಳಿ ನಡೆಸಿದ್ದು ಕಳೆದ ಎರಡು ದಿನಗಳಲ್ಲಿ ಎರಡು ಹಸುಗಳನ್ನು ಬಲಿ ಪಡೆದಿದೆ.

ಕೊಡಗು ಜಿಲ್ಲೆಯ ತೂಚಮಕೇರಿಯ ಚಿಂಡಮಾಡ ವಿಶು ಎಂಬುವವರ ಹಸುವನ್ನು ಬಲಿ ಪಡೆದಿದ್ದ ಹುಲಿಯು ನಿನ್ನೆ ಇನ್ನೋರ್ವರ ಮನೆಯ ಹಸುವನ್ನು ಕೊಂದಿದೆ. ಘಟನೆಯ ಕುರಿತಾಗಿ ಸ್ಥಳೀಯರು ಹಾಗೂ ಗ್ರಾಮಸ್ಥರು ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಚ್ಚಾಗಿ ಮಲೆನಾಡು ಭಾಗದಲ್ಲಿ ಈ ಸಮಯವು ಕೃಷಿ ಚಟುವಟಿಕೆಗಳಿಂದ ಕೂಡಿದ್ದು ಈ ಸಮಯದಲ್ಲಿ ಮಲೆನಾಡಿಗರು ತೋಟಗಳಲ್ಲಿ ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿರುತ್ತಾರೆ ಹಾಗೂ ತೋಟದ ಕಾರ್ಮಿಕರು ಕೂಡ ಹೆಚ್ಚಾಗಿ ಈ ಸಮಯದಲ್ಲಿ ತೋಟಗಳಲ್ಲಿ ಕೆಲಸ ಮಾಡುವುದರಿಂದ ಅವರೂ ಕೂಡ ಹೆದರುತ್ತಾರೆ ಎಂದು ಕೆಲ ತೋಟದ ಮಾಲೀಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.