ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆಗೆ ಒತ್ತಾಯಿಸಿ ಶೃಂಗೇರಿ ತಾಲೂಕು ಆಸ್ಪತ್ರೆ ಬಳಿ ಸಾರ್ವಜನಿಕರು, ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದಕ್ಕೆ ಹಕ್ಕುಪತ್ರ ಹಗರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಆರೋಪಿ ತಹಶೀಲ್ದಾರ್ ಅಂಬುಜಾ ನೇರ ಹೊಣೆ ಎಂದು ಆರೋಪ ಮಾಡಲಾಗಿದೆ. ಅಮಾಯಕನ ಸಾವಿಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ. ಹಕ್ಕುಪತ್ರ ಹಗರಣದಲ್ಲಿ ಕೆಲವು ಬ್ರೋಕರ್ ಗಳ ಹಾವಳಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಛೇರಿ ಮಾರಾಟಕ್ಕಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳ ದುರಾಸೆಗೆ ಅಮಾಯಕನ ಬಲಿಯಾಗಿದೆ ಕೂಡಲೇ ಸೂಕ್ತ ತನಿಖೆ ನಡೆಸಿ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ವಿಜೇತ್ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿ ಅಂಬುಜಾ ಹಾಗೂ ತಾಲೂಕು ಕಛೇರಿಯ ಉನ್ನತ ಅಧಿಕಾರಿಗಳು, ಕಮಿಷನ್ ಏಜೆಂಟರು ಇದಕ್ಕೆ ನೇರ ಹೊಣೆ ಎಂದು ಆರೋಪಿಸಲಾಗಿದೆ.

ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಶೃಂಗೇರಿಗೆ ಕೂಡಲೇ ಆಗಮಿಸಬೇಕು ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ.

ಕಡತ ವಿಲೇವಾರಿಗೆ ಬಳಕೆ ಅನುಮಾನ: ವಿಜೇತ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದು, ತಾಲೂಕು ಕಛೇರಿಯ ಕೆಲವು ಮೇಲಾಧಿಕಾರಿಗಳು ತಮ್ಮ ಅಕ್ರಮ ಚಟುವಟಿಕೆಗೆ ವಿಜೇತ್ ನನ್ನು ಹೊಣೆಯಾಗಿಸಿ ಬಲಿಯಾಗಿಸಿದರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ