ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನಗಳಿಗೆ ಸ್ವಾತಂತ್ರ ನೀಡಿರುವುದರ ವಿರುದ್ಧವಾಗಿ ಡಿ.ಕೆ ಶಿವಕುಮಾರ್ ಮಾತನಾಡುವ ಬದಲು ಮತಾಂತರ ಆಗುವುದು ಒಳಿತು ಎಂದು ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.

ದೇವಾಲಯಗಳು ಸ್ವಾತಂತ್ರ್ಯದಿಂದ ಕಾರ್ಯನಿರ್ವಹಣೆ ಮಾಡಬೇಕು ಯಾವುದೇ ಅಡಚಣೆಗಳು ಈ ವಿಚಾರದಲ್ಲಿ ಮೂಡಬಾರದು ಎಂಬ ಕುರಿತಾಗಿ ನಾವಿದ್ದೇವೆ ಇದರಿಂದ ಡಿಕೆ ಶಿವಕುಮಾರ್ ಅವರಿಗೆ ನಷ್ಟವೇನು ಎಂಬುದು ಅರ್ಥವಾಗುತ್ತಿಲ್ಲ ಇದರ ಬದಲಾಗಿ ಅವರು ಜಿಲ್ಲಾಧಿಕಾರಿಗಳಿಗೆ  ಅರ್ಜಿ ಸಲ್ಲಿಸಿ 30 ದಿನಗಳ ಅವಧಿಯ ನಂತರ ಮತಾಂತರ ಆಗುವುದು ಒಳಿತು ಎಂದು ವ್ಯಂಗ್ಯವಾಡಿದರು.

ಕೇವಲ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ  ಓಲೈಕೆಯ ಕುರಿತಾಗಿ ಇವರುಗಳು ಇದ್ದಾರೆ ಹಿಂದೂಗಳ ಉನ್ನತಿಕಡೆಗೆ ಗಮನ ಹರಿಸಿದರೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರೆ ಕಾಂಗ್ರೆಸ್ಸಿಗರಿಗೆ ಎಲ್ಲಿಲ್ಲದ ಉರಿ ಎಂದು ಕುಟುಕಿದರು. ಹಿಂದೂಗಳ ಮನೆಯ ಹೆಣ್ಣುಮಕ್ಕಳನ್ನು ಅನ್ಯಧರ್ಮೀಯರು ಮತಾಂತರ ಮಾಡಿ ಅವರ ಜೀವನ ಹಾಳುಮಾಡಿದಾಗ ಇವರಿಗೆ ನೋವಿಲ್ಲ ಮೂಕ ಪ್ರಾಣಿ ಗೋವನ್ನು ಹತ್ಯೆ ಮಾಡುವಾಗ ಇವರಿಗೆ ನೋವಿಲ್ಲ, ಕಟುಕರ ಪರವಾಗಿಯೇ ನಿಲ್ಲುವ ಇವರಿಗೆ ಹಿಂದೂಗಳ ಒಳಿತಿಗಾಗಿ ಯಾವುದಾದರೂ ಉತ್ತಮ ಕಾರ್ಯಗಳನ್ನು ಮಾಡಿದಾಗ ಎಲ್ಲಿಲ್ಲದ ಪ್ರಶ್ನೆಗಳು ಕಾಡುತ್ತವೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿರುವುದು ಧರ್ಮದ ಪರವಾಗಿ ನಿಲ್ಲುವವರು, ದೇಶಾಭಿಮಾನ ಹೊಂದಿರುವ ವ್ಯಕ್ತಿಗಳು ಭಾರತೀಯ ಜನತಾ ಪಾರ್ಟಿಯಲ್ಲಿರುತ್ತಾರೆ ಎಂದರು. 

ಕಾಂಗ್ರೆಸ್ ಅಳಿವಿನಂಚಿನಲ್ಲಿದೆ ಯಾರು ಧರ್ಮದ ವಿರುದ್ಧವಾಗಿ ನಡೆಯುತ್ತಾರೋ ಅವರು ನಾಶವಾಗುತ್ತಾರೆ ಅದೇ ಸ್ಥಿತಿಯಲ್ಲಿ ಈಗ ಕಾಂಗ್ರೆಸ್ ಇದೆ ಎಂದರು.