ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಖಾಸಗೀ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಾನವಿಗೌಡ ಎಂಬ ಯುವತಿ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿರುವ ದುಃಖದ ಸಂಗತಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಟ್ಟಿನಮನೆ ಸಮೀಪದ ಮಕ್ಕಿಮನೆಯ ಯುವತಿ ಗಾನವಿಗೌಡ (22) ಕೃಷ್ಣಮೂರ್ತಿ ಹಾಗೂ ಲೀಲಾವತಿ ದಂಪತಿಗಳ ಸುಪುತ್ರಿ. ಈಕೆ ಶಿವಮೊಗ್ಗದ ಖಾಸಗೀ ಆಸ್ಪತ್ರೆಯಲ್ಲಿ ದಾದಿ (ನರ್ಸ್) ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಳು. ಕಳೆದ ವಾರ ಆಸ್ಪತ್ರೆಯಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಅವರನ್ನು ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಈಕೆಯನ್ನು ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಬೇಕೆಂದು ಸೂಚಿಸಿದರು ಅವರ ಸೂಚನೆಯ ಮೇರೆಗೆ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳಿನ ಸಮಸ್ಯೆ ಇರುವ ಕಾರಣ ಆಕೆ ಕುಸಿದು ಬಿದ್ದಿದ್ದಾಳೆ ಅವಳ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಆಕೆಯನ್ನು ಬದುಕುಳಿಸುವುದು ಅತ್ಯಂತ ಕಷ್ಟ ಎಂದು ಕುಟುಂಬದ ಸದಸ್ಯರಲ್ಲಿ ತಿಳಿಸಿದಾಗ ಬಹಳ ಧೃಢ ನಿರ್ಧಾರ ಮಾಡಿದ ಆಕೆಯ ಕುಟುಂಬಸ್ಥರು ಅವಳ ಅಂಗಾಂಗ ದಾನಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 

ಇದನ್ನೂ ಓದಿ : ಅಕ್ರಮ ಕಳ್ಳಭಟ್ಟಿ ತಯಾರಿಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು

ಗಾನವಿ ಬದುಕುಳಿಯುವುದಿಲ್ಲ ಎಂಬುದನ್ನು ವೈದ್ಯರು ಧೃಢ ಪಡಿಸಿದ ಮೇಲೆ ಆಕೆಯ ದೇಹವನ್ನು ನಿಗಾವಣೆಯಲ್ಲಿರಿಸಿ ಹೃದಯ, ಕಿಡ್ನಿ, ಕಣ್ಣು, ಲಿವರ್ ಗಳನ್ನು ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಿ ಇತರರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ಮಲೆನಾಡಿನ ಹೆಣ್ಣು ಮಗಳೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. 

ಈಕೆಯ ಪೋಷಕರು ಅತ್ಯಂತ ಬಡತನದಲ್ಲಿದ್ದು ಕೂಲಿ ಮಾಡಿಕೊಂಡು ಇಂದಿಗೂ ಜೀವನ ನಡೆಸುತ್ತಿದ್ದಾರೆ. ಅತ್ಯಂತ ಬೇಸರದ ಸಮಯದಲ್ಲೂ ಧೃತಿಗೆಡದೇ ಮಗಳು ಜೊತೆಯಲ್ಲಿ ಇಲ್ಲದೇ ಇದ್ದರೂ ಕೂಡ ಬೇರೆಯವರು ಅವಳ ಅಂಗಗಳಿಂದ ಜೀವನ ನಡೆಸುವಂತಾಗಲಿ ಎಂಬುವುದರ ಮೂಲಕ ಅವರು ಕೈಗೊಂಡಿರುವ ನಿರ್ಧಾರ ಮಹತ್ವಪೂರ್ಣವಾದುದು.

ಮದುವೆಯ ಮನೆಯಲ್ಲಿ ಸೂತಕದ ಛಾಯೆ :

ಮೃತ ಗಾನವಿಯ ಸಹೋದರಿಯ ಮದುವೆ ಫೆಬ್ರವರಿ 20 ರಂದು ನಿಗದಿಯಾಗಿತ್ತು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುವ ಸಮಯದಲ್ಲಿ ಸೂತಕದ ಛಾಯೆ ಅವರಿಸಿರುವುದು ಕುಟುಂಬಸ್ಥರನ್ನು ಹಾಗೂ ಸಂಬಂಧಿಕರನ್ನು ಇನ್ನಷ್ಟು ದುಃಖಕ್ಕೀಡುಮಾಡಿದೆ. 

ಈಕೆಯ ಸಾವಿನ ಕುರಿತು ಹಾಗೂ ಅಂಗಾಂಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಕುಟುಂಬಕ್ಕೂ ಸಚಿವ ಡಾ.ಕೆ ಸುಧಾಕರ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ ಬದುಕಿದ್ದಾಗ ಅನೇಕರ ಸೇವೆ ಆರೈಕೆ ಮಾಡಿ ಸತ್ತ ನಂತರ ಅಂಗಾಂಗಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿ ಸ್ವರ್ಗ ಸೇರಿರುವ ಗಾನವಿ ಎಂದಿಗೂ ಅಮರ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ 13 ಫೆಬ್ರವರಿಯಂದು ಆಕೆಯ ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಸೇರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸೇರಿದ್ದವರ ದುಃಖ ಆಕ್ರಂದನ ಮುಗಿಲು ಮುಟ್ಟಿತ್ತು.