ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಅನೇಕ ವರ್ಷಗಳಿಂದ ಸ್ವಾರ್ಥವಿಲ್ಲದೆ ಯಾವುದೇ ಪ್ರಚಾರ ಬಯಸದೆ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಂತಹ ಸಮರ್ಪಣಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿಯವರು ತಮ್ಮ ತಂದೆ ಮತ್ತು ತಾಯಿಯವರ ನಲವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಮಾಜಿಕವಾಗಿ ಅನುಕೂಲವಾಗುವಂತೆ ಕೆಲವೊಂದು ಸಮಾಜ ಸೇವೆ ಕಾರ್ಯಗಳನ್ನು ಮಾಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ನಿಜಕ್ಕೂ ಈ ರೀತಿಯ ಆಚರಣೆ ಅರ್ಥಪೂರ್ಣ ಹಾಗೂ ಸಮಾಜದಲ್ಲಿರುವ ಅನೇಕರಿಗೆ ಪ್ರೇರಣೆ ನೀಡುವಂತಹದ್ದು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗೆ ಸಹಕಾರಿಯಾಗುವಂತೆ ಮೂರು ಸರ್ಕಾರಿ ಶಾಲೆಗಳಿಗೆ ಸರಿ ಸುಮಾರು ಐವತ್ತು ಸಾವಿರಕ್ಕೂ (50,000) ಹೆಚ್ಚು ಮೊತ್ತದ ಎಲೆಕ್ಟ್ರಿಕ್ ಅಕ್ವಾಗಾರ್ಡ್ ಗಳನ್ನು, ಮತ್ತು 1 ಶಾಲೆಗೆ ವಾಟರ್ ಫಿಲ್ಟರ್ ಹಾಗೂ ಕೆಲವು ಅಂಗನವಾಡಿಗಳಿಗೆ ಉಪಯೋಗವಾಗುವಂತಹ ಪರಿಕರವನ್ನು ಕೊಡುಗೆಯಾಗಿ ನೀಡಿದ್ದಾರೆ. 

ಇದನ್ನೂ ಓದಿ : ಕೊಪ್ಪದ ಹೆಸರಾಂತ ಜೆಎಂಜೆ ಚಿತ್ರಮಂದಿರಕ್ಕೆ 48 ನೇ ವಸಂತ ; ಚಿತ್ರಾಭಿಮಾನಿಗಳಿಂದ ತುಂಬು ಹೃದಯದ ಹಾರೈಕೆ

ಹಾಗೆಯೇ ಕೊಪ್ಪದ ಗೋಲೋಕ ಮತ್ತು ಹೇರೂರಿನ ಕಾಮದೇನು ಗೋಶಾಲೆಗಳಿಗೆ ಸುಮಾರು ರೂ.55 ಸಾವಿರ ಮೊತ್ತದ ಹಿಂಡಿ ಹಾಗೂ ಹುಲ್ಲನ್ನು ನೀಡಿರುತ್ತಾರೆ. ಅತ್ಯಂತ ಸಂಕಷ್ಟದಲ್ಲಿರುವ ಕಡು ಬಡ ಕುಟುಂಬಗಳಿಗೆ ಮೂರು ತಿಂಗಳಿಗಾಗುವಷ್ಟು ದಿನಸಿ ಕಿಟ್ ಗಳನ್ನು ಹಾಗೂ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಕೆಲವು ಕಡು ಬಡವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ದೃಷ್ಟಿ ಸಮಸ್ಯೆ ನಿವಾರಿಸಲು ರೂ. 25000 ಮೊತ್ತವನ್ನು ದೇಣಿಗೆಯಾಗಿ ನೀಡಿರುತ್ತಾರೆ.

ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ, ಅದನ್ನು ಪೂರೈಸುವ ನಿಟ್ಟಿನಲ್ಲಿ ಸಮರ್ಪಣ ಟ್ರಸ್ಟ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಪ್ರವಾಹದ ಸಂದರ್ಭದಲ್ಲಿ ನೆರವು, ಆನ್ಲೈನ್ ಶಿಕ್ಷಣಕ್ಕೆ ಲ್ಯಾಪ್ ಟಾಪ್ ಕೊಡುಗೆ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಕಾರ್ಯಗಳನ್ನು ಟ್ರಸ್ಟ್ ಮಾಡಿಕೊಂಡು ಬಂದಿದೆ. ಇಂದು ಟ್ರಸ್ಟ್ ನ ಟ್ರಸ್ಟೀ ಅವರ ತಂದೆ ತಾಯಿಯ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ಆರ್ಥಿಕ ನೆರವಿನೊಂದಿಗೆ ನಮ್ಮ ತಂಡದ ಮೂಲಕ ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗಗಳಿಗೆ ತಲುಪಿ ಈ ಕಾರ್ಯ ಮಾಡಲಾಗಿದೆ - ಸತೀಶ್ ಜೈನ್

ಟ್ಟಸ್ಟಿಯವರು ಓದಿದ ಶಾಲೆ ಮತ್ತು ಸುತ್ತಮುತ್ತಲಿನ 3 ಶಾಲೆಗಳ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅದೇ ರೀತಿ 5 UPS , ಕೈ ತೊಳೆಯಲು ವಾಷ್ ಬೇಸಿನ್ , 10 ಖುರ್ಚಿಗಳು, 100 ಊಟದ ತಟ್ಟೆ ಇಡಲು ಸ್ಟಾಂಡ್,ಕ್ರೀಡೆಗೆ ಸಂಬಂಧ ಪಟ್ಟ ವಸ್ತುಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.

ಸಮರ್ಪಣ ತಂಡ ಈ ಹಿಂದೆ ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದ ಸಲುವಾಗಿ ಹಲವು ಶಾಲೆಗಳಿಗೆ ತೆರಳಿದಾಗ ಶಾಲೆಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಗಮನಿಸಿದ್ದು ಅದರಲ್ಲಿ ಪ್ರಮುಖವಾಗಿ ಕುಡಿಯುವ ಶುದ್ಧ ನೀರು ಹಾಗೂ ಗ್ರಂಥಾಲಯದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದನ್ನು ಪರಿಗಣಿಸಿದ್ದು. ಈಗಾಗಲೇ ಕೆಲವೊಂದು ಶಾಲೆಗಳಿಗೆ ಆಕ್ವಾಗಾರ್ಡ್ ನ್ನು ಅಳವಡಿಸುವ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಟ್ರಸ್ಟ್ ಕಲ್ಪಿಸಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಪುಸ್ತಕಗಳು ಬಹುಮುಖ್ಯ ಪಾತ್ರ ವಹಿಸುತ್ತದೆ.ಆದ್ದರಿಂದ ಸಮರ್ಪಣಾ ತಂಡ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಾಲೆಗಳಲ್ಲಿ ಸಮರ್ಪಕವಾದ ಗ್ರಂಥಾಲಯದ ವ್ಯವಸ್ಥೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಗ್ರಂಥಾಲಯಗಳ ನಿರ್ಮಾಣಕ್ಕಾಗಿ ರೂ.25000 ಮೊತ್ತದ ಪುಸ್ತಕಗಳನ್ನು ಟ್ರಸ್ಟೀಯವರು ಈ ಶುಭ ಸಂಭ್ರಮದ ದಿನದ ನೆನಪಿಗಾಗಿ ಕೊಡುಗೆಯಾಗಿ ನೀಡಿದ್ದಾರೆ.

ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಈ ಎಲ್ಲಾ ಕಾರ್ಯಗಳು ಸಮಾಜಕ್ಕೆ ನಿಜಕ್ಕೂ ಪ್ರೇರಣೀಯ. ಅನೇಕರು ಇಂತಹ ಕಾರ್ಯಗಳಿಂದ ಪ್ರೇರಣೆ ಪಡೆದುಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಬೇಕು, ಮತ್ತಷ್ಟು ಜನರಿಗೆ ಕೈಲಾದ ಸಹಾಯವನ್ನು ಮಾಡುವಂತಾಗಲಿ ಎಂದು ಟ್ರಸ್ಟ್ ನ ಸದಸ್ಯರು ಆಶಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಮರ್ಪಣ ತಂಡದ ಸದಸ್ಯರಾದ ಸತೀಶ್ ಜೈನ್, ಲೋಹಿತ್, ಸಂದೀಪ್, ರಂಜಿತ್, ಮಂಜುನಾಥ್ ಹಾಗೂ ಸ್ವಾತಿ ಉಪಸ್ಥಿತರಿದ್ದರು.