ಸಾಗರ : (ನ್ಯೂಸ್ ಮಲ್ನಾಡ್ ವರದಿ) ಸಾಗರದ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ಕಮಿಷನ್ ದಂಧೆಯ ಕುರಿತಾಗಿ ದೊಡ್ಡ ಮಟ್ಟದ ಆರೋಪ ಪ್ರತ್ಯಾರೋಪಗಳು ನಡೆದಿತ್ತು. 

ನಂತರದಲ್ಲಿ ಆಣೆ ಪ್ರಮಾಣಕ್ಕೂ ಕೂಡ ಇಬ್ಬರು ಮುಂದಾಗಿದ್ದರು. ಈ ಹಿಂದೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನ ವಕ್ತಾರ ಬೇಳೂರು ಗೋಪಾಲಕೃಷ್ಣ ತಾಕತ್ತಿದ್ದರೆ ಶಾಸಕ ಹರತಾಳು ಹಾಲಪ್ಪ ಲಾರಿ ಮಾಲೀಕರಿಂದ ಹಣ ಪಡೆದಿಲ್ಲವೆಂದು ಧರ್ಮಸ್ಥಳ ಸ್ವಾಮಿಯ ಮುಂದೆ ಆಣೆ ಪ್ರಮಾಣ ಮಾಡಲಿ ಎಂದು ಸವಾಲೆಸೆದಿದ್ದರು. ಇದಕ್ಕೆ ಸಮ್ಮತಿ ಸೂಚಿಸಿ ಅದರಂತೆಯೇ ಇಂದು ಶಾಸಕ ಹರತಾಳು ಹಾಲಪ್ಪ ತಮ್ಮ ಸಂಗಡಿಗರ ಜೊತೆಗೆ ಧರ್ಮಸ್ಥಳಕ್ಕೆ ತೆರಳಿ ಆಣೆ ಪ್ರಮಾಣ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಾಸಕ ಹಾಲಪ್ಪ ಲಾರಿ ಮಾಲೀಕರಿಂದ ಹಣ ಪಡೆದಿರುವುದು ನೂರಕ್ಕೆ ನೂರು ಸತ್ಯ ಅವರು ಹಣ ಪಡೆದಿದ್ದಾರೆ ಎಂದು ನಾನು ಈ ಹಿಂದೆ ಆರೋಪ ಮಾಡಿದ್ದೆ ಈಗ ಆಣೆ ಮಾಡಿದ್ದೇನೆ. 

ಶಾಸಕರು ಹಣ ಪಡೆದಿಲ್ಲ ಎಂದು ದೇವರ ಮುಂದೆ ಹೇಳಿದ್ದಾರೆ ಇದಕ್ಕೆ ಉತ್ತರವನ್ನು ಮುಂಬರುವ ದಿನಗಳಲ್ಲಿ ಮಂಜುನಾಥ ಸ್ವಾಮಿಯೇ ನೀಡುತ್ತಾರೆ. ಈ ದಿನ ಬೆಳಗ್ಗೆ ಹತ್ತು ಗಂಟೆಯಿಂದ 12 ಗಂಟೆಯ ಒಳಗೆ ಬರುವಂತೆ ಸಮಯವನ್ನು ನಿಗದಿಪಡಿಸಲಾಗಿತ್ತು ನಾನು ಎಲ್ಲಿಗೂ ಫಲಾಯನ ಮಾಡಿಲ್ಲ ಆರೋಪ ಮಾಡಿದ್ದೇನೆ ಮತ್ತು ಆ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.