ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ)ರಭಸವಾಗಿ ಹೋಗುತ್ತಿದ್ದ ಎತ್ತಿನಗಾಡಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಬ್ಬಿನ ಹೊಳಲು ಗ್ರಾಮದ ಗೌರಪುರ ಗ್ರಾಮ ಪಂಚಾಯತ್ ನಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಕಣಾಚಾರಿ ಮೃತ ದುರ್ದೈವಿ.
ಅಂತರಗಟ್ಟೆ ಜಾತ್ರೆಗೆ ಹಿಂದಿನಿಂದಲೂ ಎತ್ತಿನ ಗಾಡಿಗಳನ್ನು ಹೊಡೆದುಕೊಂಡು ಬರುವುದು ಪದ್ಧತಿಯಾಗಿದೆ. ಅಂತೆಯೇ ಹುಮ್ಮಸ್ಸಿನಲ್ಲಿ ಭಕ್ತರು ಎತ್ತಿನ ಗಾಡಿಯನ್ನು ಹೊಡೆದುಕೊಂಡು ಬರುವಾಗ ಬೆದರಿದ ಎತ್ತುಗಳು ಬೈಕ್ ನಲ್ಲಿ ಸಂಚಾರ ಮಾಡುತ್ತಿದ್ದ ಜಕಣಾಚಾರಿ ಅವರ ಹಿಂಭಾಗಕ್ಕೆ ಗುದ್ದಿದೆ. ತಕ್ಷಣವೇ ಅವರು ಕೆಳ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದರು. ವಿಚಾರ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೇ ಜಕಣಾಚಾರಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಆಹಾರವನ್ನರಸಿ ಬಂದು ಕೆಸರಿಗೆ ಸಿಲುಕಿದ ಹೆಣ್ಣಾನೆ ; ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ
ಎತ್ತಿನ ರೂಪದಲ್ಲಿ ಮೃತ್ಯು ಬಂದು ವಾಟರ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಜೀವವನ್ನು ತೆಗೆದುಕೊಂಡಿದೆ, ಜಕಣಾಚಾರಿ ಅವರನ್ನು ಕಳೆದುಕೊಂಡ ಕುಟುಂಬವರ್ಗ ಹಾಗೂ ಪರಿಚಯಸ್ಥರು ನೋವಿನಿಂದ ಬೇಸರ ಹೊರಹಾಕಿದ್ದಾರೆ.
ಅಪಘಾತದ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಅವಘಡದಲ್ಲಿ ಎತ್ತುಗಳೂ ಕೂಡ ಗಂಭೀರವಾಗಿ ಗಾಯಗೊಂಡಿದೆ.

0 Comments