ಹಾಸನ : (ನ್ಯೂಸ್ ಮಲ್ನಾಡ್ ವರದಿ)  ಕಾಡಾನೆಯೊಂದು ಬೆಳಗ್ಗಿನ ಜಾವ ಕೃಷಿಕರೋರ್ವರ ಮನೆಯ ಸಮೀಪದ ತೋಟಕ್ಕೆ ಆಗಮಿಸಿದಾಗ   ಸಾಕು ನಾಯಿಗಳು ಬೊಗಳಿ ಆನೆಯನ್ನು ಬೆದರಿಸಿ ವಾಪಸ್ ತೆರಳುವಂತೆ ಮಾಡಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಹಾಸನ ತಾಲೂಕಿನ ಮತ್ತೂರು ಗ್ರಾಮದಲ್ಲಿ ನಡೆದಿದೆ. ಮುಂಜಾನೆ ತೋಟದ ಸಮೀಪವಿರುವ ಮನೆಗೆ ಬಂದ ಕಾಡಾನೆಯನ್ನು ನಾಲ್ಕು ನಾಯಿಗಳು ಸುತ್ತುವರೆದು ಬೊಗಳುತ್ತ ಆನೆಯನ್ನು ಕಾಡಿದೆ. ಕುಪಿತಗೊಂಡ ಗಜವು ನಾಯಿಗಳನ್ನು  ಕೆಲ ಸಮಯ ಅಟ್ಟಾಡಿಸಿ ನಂತರದಲ್ಲಿ ಘೀಳಿಡುತ್ತಾ ಅರಣ್ಯಕ್ಕೆ ಧಾವಿಸಿದೆ. 


ಈ ದೃಶ್ಯಾವಳಿಗಳನ್ನು ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನಾಲ್ಕು ಸಾಕುನಾಯಿಗಳು ಆನೆಯನ್ನು ಬೆನ್ನಟ್ಟಿರುವುದು ಸ್ಥಳೀಯರಲ್ಲಿ ಹೆಚ್ಚಿನ ಚರ್ಚೆ ಉಂಟಾಗುವಂತೆ ಮಾಡಿದೆ.


ಈ ಭಾಗದಲ್ಲಿ ಹೆಚ್ಚಾಗಿ ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕುರಿತು ಹೆಚ್ಚಿನ ಗಮನಹರಿಸಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕಾಡು ಪ್ರಾಣಿಗಳ ಉಪಟಳದಿಂದ ನಾಶವಾಗದಂತೆ ನೋಡಿಕೊಳ್ಳಬೇಕೆಂದು ಹಾಗೂ ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.