ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಲವು ಕಾಲೇಜುಗಳಲ್ಲಿ ಈಗಾಗಲೇ ಭುಗಿಲೆದ್ದಿರುವ ಹಿಜಾಬ್ ವಿವಾದವು ಇದೀಗ ಶಿವಮೊಗ್ಗದಲ್ಲೂ ಆರಂಭವಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿರುವ ಸರ್.ಎಮ್ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಇದೀಗ ಹಿಜಾಬ್ ವಿವಾದ ಆರಂಭವಾಗಿದ್ದು ತರಗತಿಗಳಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದಿದ್ದರು.ಕಾಲೇಜಿನಲ್ಲಿ ಬೇರೆ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ನಿಯಮ ಹಾಗು ನಮಗೆ ಒಂದು ನಿಯಮವನ್ನು ವಿಧಿಸಲಾಗುತ್ತಿದೆ ಇದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅತ್ಯಾಚಾರದ ಆರೋಪದಡಿ ಜೈಲು ಸೇರಿದ್ದ ಮುಸ್ಲಿಂ ಯುವಕನೊಂದಿಗೆ ಶೃಂಗೇರಿಯ ಹಿಂದೂ ಯುವತಿ ಎಸ್ಕೇಪ್
ಕಾಲೇಜಿನಲ್ಲಿರುವ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ ಸಂಹಿತೆ ಜಾರಿಯಾಗಬೇಕು ಮತ್ತು ಕಡ್ಡಾಯವಾಗಬೇಕು ಎಂದು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಆಗ್ರಹಿಸಿದರು.
ನಂತರದಲ್ಲಿ ಈ ಕುರಿತಾಗಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ತರಗತಿಯನ್ನು ಪ್ರವೇಶ ಮಾಡುವಾಗ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರದಲ್ಲಿರಬೇಕು ಇದರಲ್ಲಿ ಯಾರಿಗೂ ಬೇರೆ ನಿಯಮಗಳಿಲ್ಲ ಹಿಜಾಬ್ ಧರಿಸಿ ಕಾಲೇಜ್ ಪ್ರವೇಶಿಸುವ ವಿದ್ಯಾರ್ಥಿನಿಯರು ಲೇಡೀಸ್ ರೂಮಿನಲ್ಲಿ ಹಿಜಾಬ್ ತೆಗೆದು ಸಮವಸ್ತ್ರದ ಜೊತೆಗೆ ಬರಬೇಕೆಂದು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ತಿಳಿಸಿದೆ. ಈ ಮಧ್ಯೆ ಕಾಲೇಜಿಗೆ ಹಿಂದೂ ಸಂಘಟನೆಗಳ ಪ್ರಮುಖರು ಆಗಮಿಸಿದಾಗ ಕೆಲ ಹೊತ್ತು ಕಾಲೇಜಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಒಟ್ಟಾರೆಯಾಗಿ ರಾಜ್ಯದ ಹಲವು ಕಡೆಗಳಲ್ಲಿ ಹಿಜಾಬ್ ಕುರಿತಾದ ವಿವಾದವು ಭುಗಿಲೇಳುತಿದ್ದು ಈ ಕುರಿತು ಇಲಾಖೆಯೇ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕೆಂದು ಪೋಷಕರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

0 Comments