ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಟ್ರಾನ್ಸ್ಫಾರ್ಮರ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾಫಿತೋಟ ಸುಟ್ಟು ಕರಕಲಾದ ದುರ್ಘಟನೆ ಅಗಳಗಂಡಿ ಸಮೀಪದ ಬೈಸೇಗದ್ದೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಸೇಗದ್ದೆ ಪದ್ಮಾವತಿ ಎಂಬುವವರಿಗೆ ಸೇರಿದ್ದ ಕಾಫಿತೋಟ ಟ್ರಾನ್ಸ್ಫಾರ್ಮರ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟು ಭಸ್ಮವಾಗಿದೆ.
ಟ್ರಾನ್ಸ್ಫಾರ್ಮರ್ ಹಳೆಯದಾಗಿದ್ದು ಅದರಿಂದ ಉಂಟಾದ ಅಗ್ನಿ ಅವಘಡದ ಪರಿಣಾಮ ಅಗಳಗಂಡಿ ಪದ್ಮಾವತಿ ಅವರ ಕಾಫಿ ತೋಟ ಸುಟ್ಟು ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತೋಟದಲ್ಲಿದ್ದ 50 ಕ್ಕೂ ಹೆಚ್ಚು ಕಾಫಿ ಗಿಡ, 20 ಸಿಲ್ವರ್ ಗಿಡಗಳು ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಹೋಗಿದೆ.
ಇದನ್ನೂ ಓದಿ : ಪೊಲೀಸ್ ಅಧಿಕಾರಿಯೋರ್ವರ ದಿಢೀರ್ ಟ್ರಾನ್ಫರ್? ಟ್ರಾನ್ಫರ್ ಸುತ್ತ ಅನುಮಾನಗಳ ಹುತ್ತ
ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬೆಂಕಿನಂದಿಸಿದ್ದು ಮುಂದಾಗಬಹುದಾದ ದೊಡ್ಡ ಅನಾಹುತವನ್ನು ತಡೆದಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿದ್ದು, ಮೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪದ್ಮಾವತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಜಾಗದಲ್ಲಿ ಜಾನುವಾರುಗಳು ಓಡಾಡುತ್ತಾ ಇರುತ್ತದೆ, ಅವುಗಳ ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಮುಂಬರುವ ದಿನಗಳಲ್ಲಿ ಏನಾದರೂ ಈ ರೀತಿಯ ಅವಘಡ ಸಂಭವಿಸಿದಲ್ಲಿ ಮೆಸ್ಕಾಂ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಮನವಹಿಸಿ ಮುಂದಾಗಬಹುದಾದ ಎಲ್ಲಾ ಅಪಾಯಗಳನ್ನು ತಡೆಯಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

0 Comments