ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಹಗಲು ಸಮಯದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಜಯಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಗಳಗಂಡಿಯ ದುರ್ಗಾನಗರ, ಜಲದುರ್ಗದ ಮುತ್ತು ಮಾರಿಯಮ್ಮ ದೇವಸ್ಥಾನದ ಕಳ್ಳತನ, ಹುಲಿಗರಡಿ, ಸೋಮನಕೊಡಿಗೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಜಯಪುರ ಪೊಲೀಸರು ತನಿಖೆ ಆರಂಭಿಸಿದ್ದರು. ಬಂಧಿತ ಆರೋಪಿ ಆಂಥೋನಿ ಲಾರೆನ್ಸ್ ಹಳೆಯ ಆರೋಪಿಯಾದ ಕಾರಣ ಅನುಮಾನದ ಮೇರೆಗೆ ಆತನನ್ನು ಬಂಧಿಸಿ ಈ ಕುರಿತು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ. 

ಇದನ್ನೂ ಓದಿ : ಶಾಸಕರು - ಮಾಜಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ತೀರ್ಮಾನ

ಬಂಧಿತನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಲಸಿನಹಳ್ಳಿ ಕುರುವಳ್ಳಿ ಗ್ರಾಮದ ಆಂಥೋನಿ ಲಾರೆನ್ಸ್ ದಾಲ್ಮೆಡ ನಾಗೇಶ್(43) ಎಂದು ಗುರುತಿಸಲಾಗಿದೆ. ಆರೋಪಿಯಿಂದ 50 ಸಾವಿರ ರೂಪಾಯಿ ಬೆಲೆ ಬಾಳುವ ಉಂಗುರ, ಒಂದು ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆರೋಪಿಗೆ ಕುಡಿತದ ಚಟವಿದ್ದು ಮೋಜು ಮಸ್ತಿ ನಡೆಸಲು ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಕಾರ್ಯಾಚರಣೆಯನ್ನು ಎಸ್ಪಿ ಅಕ್ಷಯ್ ಹೆಚ್ ಹಾಗೂ ಎಎಸ್ಪಿ ಶೃತಿ ಅನಿಲ್ ಕುಮಾರ್ ಡಿವೈಎಸ್ಪಿ ಗುರಣ್ಣ ಹೆಬ್ಬಾಳ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಜ್ಯೋತಿ, ಸಿಬ್ಬಂದಿಗಳಾದ ನಾಗರಾಜ್ ಸಿ.ಈ ಎಎಸೈ ಸತೀಶ್, ಆನಂದ್ ಬಿರಾದಾರ, ಪಾಂಡುರಂಗಪ್ಪ, ಮಂಜುನಾಥ್, ಲಕ್ಷ್ಮಣ, ದರ್ಶನ್ ಭಾಗವಹಿಸಿದ್ದರು.