ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಹಕ್ಕುಪತ್ರ ಹಗರಣದ ಸಂಬಂಧ ತನಿಖೆ ನಡೆಯುತ್ತಿದ್ದು ಮೇಲ್ನೋಟಕ್ಕೆ ಕಂಡುಬಂದ ಅಂಶಗಳ ಆಧಾರದ ಮೇಲೆ ನೂತನ ತಹಸೀಲ್ದಾರ್ ಪ್ರಸಾದ್ ಅವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರು ಜನ ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಹಕ್ಕುಪತ್ರ ಹಗರಣ ಸಂಬಂಧ ನಡೆಯುತ್ತಿರುವ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದ ಅಂಶಗಳ ಆಧಾರದ ಮೇಲೆ ದೂರು ನೀಡಲಾಗಿದ್ದು. ಕರ್ನಾಟಕ ಭೂ ಕಂದಾಯ ಕಾಯ್ದೆ 1964ನ್ನು ಉಲ್ಲಂಘಿಸಿ ಅರಣ್ಯ ಇಲಾಖೆ ಜಾಗಗಳಿಗೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಗಳಿಗೆ, ಖಾಲಿ ನಿವೇಶನಕ್ಕೆ ಹಕ್ಕುಪತ್ರ ನೀಡಿದ್ದು ಹಾಗೆಯೇ ಕಛೇರಿಯಿಂದ ಹೊರಗೆ ಕಡತಗಳನ್ನು ತಯಾರಿಸಿದ್ದು, ನಕಲಿ ಮೊಹರನ್ನು ಸಹ ಬಳಸಲಾಗಿದೆ ಎಂಬ ಅಂಶದ ಆಧಾರದ ಮೇಲೆ ದೂರು ನೀಡಲಾಗಿದೆ. ಈ ಸಂಬಂಧ ತಹಶೀಲ್ದಾರ್ ಅಂಬುಜಾ, ಸಿಬ್ಬಂದಿಗಳಾದ ಪ್ರಕಾಶ್, ಶರತ್, ಸಂದೀಪ್, ಸತೀಶ್, ಶಿವಕುಮಾರ್ ಹಾಗೂ ಇತರರು ಎಂದು ದೂರು ದಾಖಲಿಸಲಾಗಿದ್ದು ತನಿಖೆಯಲ್ಲಿ ಇನ್ನೆಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತಿಳಿಯಬೇಕಿದೆ.

ಇದನ್ನೂ ಓದಿ : ಹಾಸನ : ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿಗಳು

ತನಿಖಾ ತಂಡದಿಂದ ಇಓ ಕೈ ಬಿಡುವಂತೆ ಒತ್ತಾಯ:

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಕ್ರಮ ಇ ಸ್ವತ್ತು ಪ್ರಕರಣ ಸಂಬಂಧ ತನಿಖಾ ತಂಡದಿಂದ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತರಾದ ಅಶ್ವಿನ್ ಎಂಬುವವರು ದೂರು ನೀಡಿದ್ದು.

ದೂರಿನಲ್ಲಿ ಶೃಂಗೇರಿ ಹಕ್ಕುಪತ್ರ ಹಗರಣ ಸಂಬಂಧ ತನಿಖೆಗೆ ತಂಡವನ್ನು ರಚಿಸಿದ್ದು ಅದರಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯರಾಗಿರುತ್ತಾರೆ. ಆದರೆ 671 ಹಕ್ಕುಪತ್ರಗಳ ತನಿಖೆ ಪೂರ್ಣಗೊಳ್ಳುವ ಮೊದಲೇ ಕಾರ್ಯನಿರ್ವಹಣಾಧಿಕಾರಿಗಳು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಹಕ್ಕುಪತ್ರಗಳ ಆಧಾರದಲ್ಲಿ ದಾಖಲಾಗಿದ್ದ ಇ ಸ್ವತ್ತುಗಳನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ರದ್ದುಗೊಳಿಸಿರುತ್ತಾರೆ‌. ತನಿಖಾ ತಂಡದ ದಾರಿ ತಪ್ಪಿಸುವ ಉದ್ದೇಶದಿಂದ ಇ ಸ್ವತ್ತುಗಳನ್ನು ರದ್ದುಗೊಳಿಸಿರುತ್ತಾರೆ. ಆದ್ದರಿಂದ ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯವರನ್ನು ತನಿಖಾ ತಂಡದಿಂದ ಕೈಬಿಡಬೇಕಾಗಿ ಹಾಗೂ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿ ಒತ್ತಾಯಿಸಿದ್ದಾರೆ.

ಜಾಮೀನು ಅರ್ಜಿ ತಿರಸ್ಕೃತ: ತಹಶೀಲ್ದಾರ್ ವಾಹನ ಚಾಲಕ ವಿಜೇತ್ ಆತ್ಮಹತ್ಯೆ ಸಂಬಂಧ ಡೆತ್ ನೋಟ್ ಆಧಾರದ ಮೇಲೆ ಬಂಧಿತರಾಗಿದ್ದ ಶರತ್, ರಾಘವೇಂದ್ರ, ಹಾಗೂ ನಾಗೇಂದ್ರ ಅವರುಗಳ ಜಾಮೀನಿನ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ತಿರಸ್ಕೃತಗೊಳಿಸಿದೆ.