ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಹಿಜಾಬ್ ಬೇಕೇ ಬೇಕು ಹಿಜಾಬ್ ನಮ್ಮ ಜನ್ಮಸಿದ್ದ ಹಕ್ಕೆಂದು ಪಟ್ಟುಹಿಡಿದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ಜಮಾವಣೆಗೊಂಡಿದ್ದಾರೆ.

ಶಿವಮೊಗ್ಗದ ಡಿವಿಎಸ್ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಆಗಮಿಸಿದ್ದಾರೆ, ಈ ವೇಳೆ ನಿಯಮವನ್ನು ಪಾಲಿಸುವಂತೆ ಆಡಳಿತ ಮಂಡಳಿಯು ಕಾಲೇಜಿನ ಗೇಟ್ ಬಳಿಯೇ ತಿಳಿಸಿದಾಗ ಇದಕ್ಕೆ ಪ್ರತ್ಯುತ್ತರವಾಗಿ ಹಿಜಾಬ್ ಧರಿಸಿಯೇ ಧರಿಸುತ್ತೇವೆ ಇದು ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಶಮನವಾಗದ ಹಿಜಾಬ್ ವಿವಾದ ; ನಿಷೇಧಾಜ್ಞೆ ಜಾರಿಗೊಳಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ

ಬೇಕೆಂದೇ ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ನಮ್ಮ ವಿದ್ಯಾಭ್ಯಾಸಕ್ಕೆ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತಿದೆ, ಕಳೆದ ಅನೇಕ ದಿನಗಳಿಂದ ಕಾಲೇಜಿನ ಗೇಟ್ ಬಳಿಯೇ ನಮ್ಮನ್ನು ತಡೆದು ನಮ್ಮ ವಿದ್ಯಾಭ್ಯಾಸವನ್ನು ಹಾಳು ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. 

ಹೈಕೋರ್ಟ್ ನ ಮಧ್ಯಂತರ ಆದೇಶದಂತೆ ಕಾಲೇಜಿನ ಆಡಳಿತ ಮಂಡಳಿಯು ಕಾರ್ಯ ನಿರ್ವಹಿಸುತ್ತಿದೆ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಕಾಲೇಜಿನ ಸಮವಸ್ತ್ರವನ್ನು ಮಾತ್ರ ಧರಿಸಿಕೊಂಡು ಕಾಲೇಜಿಗೆ ಆಗಮಿಸಬೇಕು. ಕಾಲೇಜಿನ ಆಡಳಿತ ಮಂಡಳಿಯ ಜೊತೆಗೆ ವಿದ್ಯಾರ್ಥಿಗಳು ಸಹಕಾರ ನೀಡಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.