ಕೊಡಗು : (ನ್ಯೂಸ್ ಮಲ್ನಾಡ್ ವರದಿ)  ಇಬ್ಬರು ವಯಸ್ಸಾದ ಮಹಿಳೆಯರು ವಾಸವಿದ್ದ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ನೇಪಾಳ ಮೂಲದ ಐವರು ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 

ಕೊಡಗು ಜಿಲ್ಲೆಯ ನಾಪೋಕ್ಲುವಿನ ಕೊಳಕೇರಿ ಗ್ರಾಮದ ಮೂಟೇರಿಯಲ್ಲಿ ಇಬ್ಬರು ವಯೋವೃದ್ಧರು ವಾಸವಾಗಿದ್ದರು. ಮನೆಗೆ ನುಗ್ಗಿದ ಈ ಕಳ್ಳರ ಗ್ಯಾಂಗ್ ವೃದ್ದರಿಗೆ ಜೀವ ಭಯವೊಡ್ಡಿ ಹಣ ಹಾಗೂ ಆಭರಣವನ್ನು ದೋಚಿದ್ದರು. 

ಈ ಕುರಿತು ಜಾನಕಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು, ದೂರಿನ ಅನ್ವಯ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ದಿಲ್‌ ಬಹದ್ದೂರು ರಾಹುಲ್‌ (51), ಈಶ್ವರ್‌ ಥಾಪಾ (48), ಪ್ರೇಮ್‌ ಬಹದೂರ್‌ (30), ಸುದೀಪ್‌ ಜೆತಾರ (20) ಹಾಗೂ ಕಮಲ ಸಿಂಗ್‌ (32)  ಈ ಕೃತ್ಯವನ್ನು ನಡೆಸಿದ ಐವರು ಆರೋಪಿಗಳು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. 

ಈ ಭಾಗದಲ್ಲಿ ನಿರಂತರವಾಗಿ ವಯೋವೃದ್ಧರನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು ಇಲಾಖೆಯು ಈ ಕುರಿತು ನಿಗಾವಹಿಸಿದೆ, ಮುಂಬರುವ  ದಿನಗಳಲ್ಲಿ ಯಾರೇ ಈ ಕೃತ್ಯಗಳನ್ನು ಎಸಗಿದರೂ ಕೂಡ ಕಾನೂನಿನ ಅಡಿಯಲ್ಲಿ ಬರುವ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಬಂಧಿತರಿಂದ 99 ಗ್ರಾಂ. ಚಿನ್ನಾಭರಣ 42,500 ರೂ ನಗದು ಸೇರಿದಂತೆ ಒಟ್ಟು 5,42,500 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.