ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಕಳ್ಳರು ಮನೆಯಲ್ಲಿದ್ದ ಹಣ ಹಾಗೂ ಮೊಬೈಲ್ ಫೋನನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ವ್ಯಾಪ್ತಿಯ ಹುಲಿಗರಡಿ ಸೈಟ್ನಲ್ಲಿ ವಾಸವಿರುವ ರವಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಮನೆಯ ಮುಂಬಾಗಿಲ ಬೀಗ ಒಡೆದು ಮನೆಯ ಬೀರುವಿನಲ್ಲಿರಿಸಿದ್ದ ಮೂರುವರೆ ಸಾವಿರ ರೂಪಾಯಿ ಹಣವನ್ನು ಹಾಗೂ ಒಂದು ಮೊಬೈಲ್ ಫೋನನ್ನು ದೋಚಿದ್ದಾರೆ. 

ರವಿಅವರ ಕುಟುಂಬದ ಮೂವರು ಕೂಲಿ ಕೆಲಸದ ನಿಮಿತ್ತ ಬೇರೆಡೆಗೆ ಹೋದಾಗ ಹಾಗೂ ಇಬ್ಬರು ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವ ಕಾರಣ ಹೊರ ತೆರಳಿದಾಗ ಈ ಕೃತ್ಯ ಎಸಗಲಾಗಿದೆ ಎಂದು ಅಂದಾಜಿಸಲಾಗಿದೆ. 

ಇದೇನು ಮೊದಲ ಕಳ್ಳತನ ಪ್ರಕರಣ ಈ ಭಾಗದಲ್ಲಿ ದಾಖಲಾಗಿರುವುದಲ್ಲ ಅಗಳಗಂಡಿ ಸುತ್ತ ಮುತ್ತಲಿನ ಸಣ್ಣ ಗ್ರಾಮಗಳಾದ ಕಚಿಗೆ, ಜಯಪುರ, ಹೇರೂರು ಭಾಗದಲ್ಲಿ ಕಳ್ಳತನ ನಡೆಯುತ್ತಿತ್ತು ಆ ಕಳ್ಳತನಗಳು ನಡೆದ ಒಂದು ವರ್ಷದ ಬಳಿಕ ಕಳ್ಳರನ್ನು ಹಿಡಿಯಲಾಗಿತ್ತು.

ಈ ಕಳ್ಳತನಕ್ಕೆ ಸಂಬಂಧಪಟ್ಟಂತೆ ಜಯಪುರ ಪೊಲೀಸ್ ಠಾಣೆಗೆ ರವಿ ಅವರು ದೂರು ನೀಡಿದ್ದಾರೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.