ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದ ಹೆಣ್ಣಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೂರು ಸಾಕಾನೆಗಳ ಜೊತೆಗೆ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ಅಕ್ರಮ ಮತಾಂತರಕ್ಕೆ ಯತ್ನಿಸಿದ ಆರೋಪ ; ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯ ಪಟ್ಟಣ ಸಮೀಪದ ದಾಸವಾಳ ಗ್ರಾಮದ ಕಾಫಿ ತೋಟದ ಬಳಿ ಕೆಸರಿನಲ್ಲಿ ಸಿಲುಕಿದ್ದ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಆನೆಯು ಎಂಟು ವರ್ಷ ಪ್ರಾಯದ್ದಾಗಿದ್ದು ರಾತ್ರಿ ಇಡೀ ಕೆಸರಿನಲ್ಲಿ ಸಿಲುಕಿ ನರಳಾಟ ನಡೆಸಿತ್ತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ ಕೂಡಲೇ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಯನ್ನು ಕೆಸರಿನಿಂದ ಮೇಲೆತ್ತಲು ದುಬಾರೆ ಸಾಕಾನೆಗಳ ಶಿಬಿರದಿಂದ ಮೂರು ಆನೆಗಳನ್ನು ಕರೆಸಿ ಆನೆಯನ್ನು ಮೇಲಕ್ಕೆತ್ತಲು ಯಶಸ್ವಿಯಾಗಿದ್ದಾರೆ.
ಆನೆಯು ರಾತ್ರಿಯಿಡೀ ಕೆಸರಿನಲ್ಲಿ ನರಳಾಡಿದ ಕಾರಣ ನಿತ್ರಾಣಗೊಂಡಿತ್ತು ನಂತರದಲ್ಲಿ ವೈದ್ಯರು ಆನೆಗೆ ಚಿಕಿತ್ಸೆ ನೀಡಿ ಆನೆಯು ಸಹಜ ಸ್ಥಿತಿಗೆ ಮರಳುವಂತೆ ಮಾಡಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ಕಾಡಾನೆಗಳು ಅರಣ್ಯದಿಂದ ರೈತರ ತೋಟದ ಕಡೆಗೆ ಧಾವಿಸಿ ಬೆಳೆ ನಾಶ ಮಾಡುತ್ತಿದೆ, ಈ ಭಾಗದ ರೈತರಿಗೆ ಪೂರಕವಾಗಿ ದೊರೆಯಬೇಕಾದ ಪರಿಹಾರಗಳು ಶೀಘ್ರವಾಗಿ ದೊರೆಯಬೇಕೆಂದು ಈ ಭಾಗದ ಕೃಷಿಕರು ಅಧಿಕಾರಿಗಳನ್ನು ಕೋರಿದ್ದಾರೆ.

0 Comments