ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ಸಮಸ್ಯೆ ಉಂಟಾಗುವಂತೆ ಕಣ್ಣು ಕುಕ್ಕುವ ಲೈಟ್ ಗಳನ್ನು ವಾಹನಗಳಿಗೆ ಅಳವಡಿಸಿಕೊಂಡು ಸಂಚಾರ ನಡೆಸುತ್ತಿದ್ದ ಅನೇಕ ವಾಹನಗಳ ಲೈಟ್ ಗಳನ್ನು ಮಾನ್ಯ ಎಸ್ಪಿ ಹಾಗೂ ಡಿವೈಎಸ್ಪಿ ರವರ ಆದೇಶದಂತೆ ಕೊಪ್ಪ ಠಾಣೆಯ ಆರಕ್ಷಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿಯ ಸಮಯದಲ್ಲಿ ವಾಹನ ಸಂಚಾರ ಮಾಡುವವರಿಗೆ ಇತರ ವಾಹನಗಳ ಹೆಚ್ಚುವರಿ ಲೈಟ್ ಗಳಿಂದ ಉಂಟಾಗುತ್ತಿದ್ದ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳಿಗೆ ಅಳವಡಿಸಲಾಗಿದ್ದ ಹೆಚ್ಚುವರಿ ಫೋಕಸ್ ಲೈಟ್ ಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ವಾಹನಗಳಲ್ಲಿ ಅನಧಿಕೃತವಾಗಿ ಹಾಗೂ ಹೆಚ್ಚುವರಿಯಾಗಿ ಅಳವಡಿಕೆ ಮಾಡಿರುವ ಬಲ್ಬ್ ಗಳನ್ನು ತೆಗೆಸಲಾಗಿದೆ. ಇಂತಹ ಕಣ್ಣು ಕುಕ್ಕುವ ಲೈಟ್ ಅಳವಡಿಸುವುದರಿಂದ ಮುಂಬರುವ ವಾಹನ ಸವಾರರಿಗೆ ತೊಂದರೆಯಾಗಲಿದೆ. ಅಲ್ಲದೇ ಇದರಿಂದ ಅಪಘಾತಗಳು ಹೆಚ್ಚಾಗಲಿವೆ. ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಬೇಕು - ಶ್ರೀನಾಥ್ ರೆಡ್ಡಿ, ಕೊಪ್ಪ ಪಿಎಸೈ
ಇದನ್ನೂ ಓದಿ : 62 ಚೀಲ ಅಡಿಕೆ ಕಳ್ಳತನ ; ರಾತ್ರೋ ರಾತ್ರಿ ಕೈಚಳಕ ತೋರಿದ ಕಳ್ಳರು
ಕೊಪ್ಪ ಪೊಲೀಸರು ನಡೆಸಿದ ಈ ವಿಶೇಷ ಕಾರ್ಯಾಚರಣೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾತ್ರಿಯ ವೇಳೆ ವಾಹನಗಳಲ್ಲಿ ಸಂಚಾರ ಮಾಡಲು ಎದುರಿನಿಂದ ಬರುವ ವಾಹನಗಳ ಕಣ್ಣು ಕುಕ್ಕುವ ರೀತಿಯ ಲೈಟ್ಗಳು ಅತ್ಯಂತ ತೊಂದರೆ ನೀಡುತ್ತಿತ್ತು ಪೊಲೀಸರು ನಡೆಸಿದ ಈ ಕಾರ್ಯಾಚರಣೆಯ ಮೂಲಕ ಬೇರೆಯವರಿಗೆ ತೊಂದರೆ ಉಂಟಾಗುವ ಲೈಟ್ ಅಳವಡಿಕೆ ಮಾಡಿಕೊಂಡಿರುವ ವಾಹನ ಸವಾರರು ವಾಹನಗಳಿಂದ ಅದನ್ನು ತೆಗೆಯುತ್ತಾರೆ ಹಾಗೂ ಕೆಲವನ್ನು ಪೊಲೀಸರೇ ತೆಗೆದಿದ್ದಾರೆ ಇದು ಅತ್ಯಂತ ಉತ್ತಮ ಹಾಗೂ ಸಾರ್ವಜನಿಕರ ಒಳಿತಿಗಾಗಿ ಮಾಡಿರುವ ಕಾರ್ಯವಾಗಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

0 Comments