ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕ್ರೀಡಾ ಕ್ಷೇತ್ರದಲ್ಲಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಒಂದಿಲ್ಲೊಂದು ಸಾಧನೆಯನ್ನು ಮಾಡುವ ಮೂಲಕ ಕಾಲೇಜಿಗೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತಂದುಕೊಡುತ್ತಿದ್ದಾರೆ. 

ಇದನ್ನೂ ಓದಿ: ಚಿಕ್ಕಮಗಳೂರು ನಗರದಲ್ಲಿ ಜೆಸಿಬಿಗಳ ಸದ್ದು ; ಅನಧಿಕೃತ ನಿರ್ಮಿತ ಕಟ್ಟಡಗಳ ತೆರವು

ಫೆಬ್ರವರಿ 21ರಂದು ಜ್ಞಾನ ಸೈಹಾದ್ರಿ ಶಂಕರಘಟ್ಟ ಇಲ್ಲಿ ನಡೆದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಜೆಸಿಬಿಎಮ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ವಿವೇಕ್ ಇವರು 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಅತ್ಯುತ್ತಮವಾದ ಸಾಧನೆಯನ್ನು ಮಾಡುವುದರ ಮೂಲಕ ಪ್ರಥಮ ಸ್ಥಾನವನ್ನು ಅಲಂಕರಿಸಿ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. 54 ಕೆಜಿ ವಿಭಾಗದಲ್ಲಿ ಸಂಹಿತ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ, ಹಾಗೂ ಕೃಷ್ಣ ನಾಯಕ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ, 58 ಕೆಜಿ ವಿಭಾಗದಲ್ಲಿ ಕಾರ್ತಿಕ್ ಎಂಬ ವಿದ್ಯಾರ್ಥಿ ತೃತೀಯ ಸ್ಥಾನವನ್ನುಗಳಿಸಿದ್ದಾರೆ. 74 ಕೆಜಿ ವಿಭಾಗದಲ್ಲಿ ಪ್ರಫುಲ್ಲ ಎಂಬ ವಿದ್ಯಾರ್ಥಿಯು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯಲ್ಲಿ ಶೃಂಗೇರಿಯ ಜೆಸಿಬಿಎಂ ಕಾಲೇಜು ದ್ವಿತೀಯ ಚಾಂಪಿಯನ್ಶಿಪ್ ನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಅಂತೆಯೇ ಫೆಬ್ರವರಿ 25 26 ನೇ ತಾರೀಖಿನಂದು ಕೋಣಂದೂರಿನ ಶರಾವತಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತರಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮವಾದ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. 

ಫೆಬ್ರವರಿ 22 ರಿಂದ 25 ರವರೆಗೆ ಚೆನ್ನೈನಲ್ಲಿ ನಡೆದ ಮಹಿಳೆಯರ ಇಂಟರ್ ಯೂನಿವರ್ಸಿಟಿ ಕಬಡ್ಡಿ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ನಿಶ್ಚಿತ, ಶ್ರೇಯ, ಚಂದನ ಹಾಗೂ ಮೈತ್ರಿ ಎಂಬ ನಾಲ್ವರು ಭಾಗವಹಿಸಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕ್ರೀಡಾಕ್ಷೇತ್ರದಲ್ಲಿ ದಿನಕಳೆದಂತೆ ಅತ್ಯುತ್ತಮವಾದ ಸಾಧನೆಗಳನ್ನು ವಿದ್ಯಾರ್ಥಿಗಳು ಮಾಡುವಲ್ಲಿ ದೈಹಿಕ ಶಿಕ್ಷಕರಾದ ಶ್ರೀ ರವಿಕಿರಣ್ ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯೂ ಅಪಾರವಾದುದು. 

ನಡೆದ ಎಲ್ಲಾ ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಕಾಲೇಜಿಗೆ ಪ್ರಶಸ್ತಿಯನ್ನು ತರುವಲ್ಲಿ ಶ್ರಮವಹಿಸಿದ ಎಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಭಾಗವಹಿಸಿದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸ್ವಾಮಿ ಎಂ ಹಾಗೂ ದೈಹಿಕ ನಿರ್ದೇಶಕರಾದ ಶ್ರೀ ರವಿಕಿರಣ್, ಕಾಲೇಜಿನ ವಿಶ್ವಸ್ಥ ಮಂಡಳಿ, ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.