ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಹಿಮಪಾತಕ್ಕೆ ಸಿಲುಕಿ ಜಮ್ಮು ಕಾಶ್ಮೀರದ ಶ್ರೀ ನಗರದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಕೊಡಗಿನ ವೀರಯೋಧ ಅಲ್ತಾಫ್ ಅಹಮ್ಮದ್ ಅವರ ಪಾರ್ಥೀವ ಶರೀರಕ್ಕೆ ಸಲ್ಯೂಟ್ ಹೊಡೆಯಬೇಕೆಂದು ಅವರ ಪುತ್ರಿ ಸೇನಾ ಮಾದರಿಯ ಸಮವಸ್ತ್ರವನ್ನು ಖರೀದಿ ಮಾಡಿ ಮೃತಹೊಂದಿದ ತಂದೆಗೆ ಸೆಲ್ಯೂಟ್ ಮಾಡಿ ಗೌರವ ಪ್ರದರ್ಶಿಸಿದ್ದಾಳೆ.
ಫೆಬ್ರವರಿ 23 ರಂದು ಹುತಾತ್ಮರಾದ ವೀರ ಯೋಧ ಅಲ್ತಾಫ್ ಅಹಮದ್ ಅವರ ಪಾರ್ಥೀವ ಶರೀರ ಕೊಡಗು ಜಿಲ್ಲೆಯ ವಿರಾಜಪೇಟೆ ಗೆ ತಲುಪಿದ ಬಳಿಕ ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ಇಂದು ನೆರವೇರಿತು. ಈ ಸಮಯದಲ್ಲಿ ಅವರ ಪುತ್ರಿ ಸೇನೆಯ ಸೈನಿಕರು ಧರಿಸುವ ರೀತಿಯ ವಸ್ತ್ರವನ್ನು ಧರಿಸಿ ತಂದೆಗೆ ಸೆಲ್ಯೂಟ್ ಹೊಡೆಯಬೇಕೆಂಬ ತನ್ನ ಇಚ್ಛೆಯನ್ನು ತಾಯಿಗೆ ತಿಳಿಸಿದ್ದಾಳೆ, ಅಂತೆಯೇ ಮೃತ ಅಲ್ತಾಫ್ ರ ಪುತ್ರ ಹಾಗೂ ಪುತ್ರಿ ವಸ್ತ್ರವನ್ನು ಖರೀದಿಸಿ ತಂದೆಗೆ ಸೆಲ್ಯೂಟ್ ಮಾಡಿದ್ದಾರೆ, ವಿರಾಜಪೇಟೆ ತಾಲೂಕು ಮೈದಾನದಲ್ಲಿ ಈ ದೃಶ್ಯವನ್ನು ಕಂಡವರ ಕಣ್ಣಾಲಿಗಳು ಸಂಪೂರ್ಣ ತೇವಗೊಂಡಿತ್ತು.
ಇದನ್ನೂ ಓದಿ : ವೃದ್ಧೆಯರ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಐವರು ಖತರ್ನಾಕ್ ಕಳ್ಳರು ಖಾಕಿ ವಶಕ್ಕೆ
ಮೂಲತಃ ವಿರಾಜಪೇಟೆಯವರಾದ ಅಲ್ತಾಫ್ ಅಹಮದ್ ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಪಿಯುಸಿ ಮುಗಿಸಿದ ನಂತರ ಭಾರತೀಯ ಸೇನೆಯನ್ನು ಸೇರಿದ್ದರು. ಸುದೀರ್ಘವಾಗಿ 19 ವರ್ಷಗಳು ಸೇವೆ ಸಲ್ಲಿಸಿದ ಅವರು ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟಿದ್ದರು. ಕೆಲ ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದ ಅವರು ಬಳಿಕ ದೇಶ ಸೇವೆ ಮಾಡುವ ಸಲುವಾಗಿ ಪುನಃ ಸೇನೆಗೆ ಸೇರಿದ್ದರು.
ಮೃತರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೇನಾ ಗೌರವ ನೀಡಿದ್ದು ಸಾರ್ವಜನಿಕರು ಕೂಡ ಪಾರ್ಥೀವ ಶರೀರದ ದರ್ಶನ ಪಡೆದು ಭಾವಪೂರ್ಣವಾಗಿ ವಿದಾಯವನ್ನು ಸಲ್ಲಿಸಿದ್ದಾರೆ. ಇಸ್ಲಾಂ ನ ವಿಧಿಗಳಂತೆ ಅಂತ್ಯಕ್ರಿಯೆ ನೆರವೇರಿತು.
ಈ ಹಿಂದೆ ಹಿಜಾಬ್ ಹಾಗೂ ಕೇಸರಿ ಶಾಲಿನ ಸಮರ ನಡೆಯುತ್ತಿದ್ದ ಸಂದರ್ಭದಲ್ಲಿ ಅತೀವವಾದ ಆಕ್ರೋಶವನ್ನು ಅಲ್ತಾಫ್ ವ್ಯಕ್ತಪಡಿಸಿದ್ದರು. ಭಾರತದ ನಾಗರೀಕರಿಗಾಗಿ ನಾವು ಸರ್ವಸ್ವವನ್ನೂ ತ್ಯಾಗ ಮಾಡಿ ದೇಶ ಕಾಯುತ್ತೇವೆ ಆದರೆ ನೀವು ಮಾತ್ರ ಜಾತಿ ಮತ ಪಂಥಕ್ಕಾಗಿ ಹೊಡೆದಾಡುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದ್ದರು.

0 Comments