ಕೊಡಗು :(ನ್ಯೂಸ್ ಮಲ್ನಾಡ್ ವರದಿ) ಪತ್ನಿ ಆತ್ಮಹತ್ಯೆಗೆ ಶರಣಾದ ವಿಷಯವನ್ನು ತಿಳಿದು ದುಃಖಿತನಾಗಿ ಪತಿಯೂ ಆತ್ಮಹತ್ಯೆಗೆ ಶರಣಾದ ಬೇಸರದ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಯುವರಾಜ್   ಕೊಡಗು ಜಿಲ್ಲೆಯ ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯುವರಾಜ್ ಕಳೆದ ಹತ್ತು ತಿಂಗಳ ಹಿಂದಷ್ಟೇ ಶಿಲ್ಪಾ ಎಂಬ ಯುವತಿಯನ್ನು ಮದುವೆಯಾಗಿದ್ದರು ಹಾಗೂ ಕೊಡಗಿನ ಬಿರುನಾಣಿಯಲ್ಲಿ ಸತ್ಯ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಒಂದೋ ನೀವು ಷರಿಯಾ ಆಯ್ಕೆ ಮಾಡ್ಕೊಳ್ಳಿ ಇಲ್ಲವೇ ಐಪಿಸಿ ಆಯ್ಕೆ ಮಾಡಿಕೊಳ್ಳಿ; ಹರ್ಷ ಹತ್ಯೆಗೆ ಜೀವರಾಜ್ ಪ್ರತಿಕ್ರಿಯೆ

ಎಂದಿನಂತೆ ಕರ್ತವ್ಯ ಮುಗಿಸಿ ಸಂಜೆಯ ವೇಳೆಗೆ ಯುವರಾಜ್ ಮನೆಗೆ ಹಿಂದಿರುಗಿದಾಗ ಪತ್ನಿ ಮನೆಯ ಬಾತ್ ರೂಮ್ ನಲ್ಲಿ ವೇಲ್ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಳು. ಈ ದೃಶ್ಯವನ್ನು ನೋಡಿದ ಯುವರಾಜ್ ಮನೆಯ ಮಾಲೀಕರನ್ನು ಕರೆದು ಅವರ ಸಹಾಯ ಪಡೆದು ಶಿಲ್ಪಾಳ ಮೃತದೇಹವನ್ನು ಕೆಳಗಿಳಿಸಿದ್ದರು.

ಈ ಕುರಿತು ಸಂಬಂಧಿಕರಿಗೆ ಫೋನ್ ನ ಮೂಲಕ ವಿಷಯವನ್ನು ತಿಳಿಸಿದ್ದ ಯುವರಾಜ್ ಕೆಲ ಸಮಯದ ನಂತರ ಆತನೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆಗೆ ನಿಖರ ಕಾರಣಗಳೇನು ಎಂದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

ಈ ಕುರಿತು ಶ್ರೀ ಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.