ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಮಡಿಕೇರಿ ಜಿಲ್ಲಾಸ್ಪತ್ರೆಯ ಮಹಿಳಾ ಹಾಗೂ ಮಕ್ಕಳ ವಿಭಾಗದಲ್ಲಿ ಅಕ್ರಮವಾಗಿ ಮತಾಂತರ ಮಾಡುವ ಪ್ರಯತ್ನವನ್ನು ಮಹಿಳೆಯೋರ್ವರು ನಡೆಸಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮಹಿಳೆಯನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಮಡಿಕೇರಿಯ ಜಿಲ್ಲಾಸ್ಪತ್ರೆಯ ಮಹಿಳಾ ಹಾಗೂ ಮಕ್ಕಳ ವಿಭಾಗದಲ್ಲಿರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಮತ ಪ್ರಚಾರ ಮಾಡಲು ಮಹಿಳೆಯೊಬ್ಬರು ಯತ್ನಿಸಿದ್ದಾರೆಂದು ಆರೋಪಿಸಿ ಶ್ರೀ ರಾಮ ಸೇನೆಯ ಮುಖಂಡ ವಿನಯ್ ತಮ್ಮ ಸ್ನೇಹಿತನ ಪತ್ನಿಯ ಮಗುವನ್ನು ನೋಡಲು ಹಾಗೂ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದಾಗ ಮಹಿಳೆ ಧರ್ಮದ ಕುರಿತಾದ ಕರಪತ್ರವನ್ನು ಹಂಚಿ ಅನ್ಯಧರ್ಮಕ್ಕೆ ಸೆಳೆಯುವ ಯತ್ನ ಮಾಡಿದ್ದಾರೆಂದು ಆರೋಪಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಬಳಿ ಧರ್ಮಗ್ರಂಥ ಹಾಗೂ ಕರಪತ್ರ ಇರುವುದು ಧೃಢ ಪಟ್ಟಿದೆ ನಂತರದಲ್ಲಿ ಆಕೆಯನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಹೊಳೆನರಸೀಪುರದ ಕವಿತಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ವೃದ್ಧಿಗಾಗಿ ಬಿಜೆಪಿ ಯುವಮೋರ್ಚಾ ವತಿಯಿಂದ ವಿಶೇಷ ಪೂಜೆ ಸಲ್ಲಿಕೆ
ಘಟನೆಯನ್ನು ಖಂಡಿಸಿರುವ ಸಂಘ ಪರಿವಾರದ ಪ್ರಮುಖರು ಆರೋಪಿ ಮಹಿಳೆಗೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು. ಈ ರೀತಿಯ ಕೃತ್ಯಗಳು ಮುಂಬರುವ ದಿನಗಳಲ್ಲಿ ನಡೆಯಬಾರದು ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚಿನ ಗಮನವಹಿಸಬೇಕು ಎಂದು ಕೋರಿದ್ದಾರೆ.

0 Comments