ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಾಲಾ ಕಾಲೇಜುಗಳಲ್ಲಿ ವಿವಾದ ಹಾಗೂ ವಿದ್ಯಾರ್ಥಿಗಳ ನಡುವೆ ಆಕ್ರೋಶ ಉಂಟು ಮಾಡುತ್ತಿರುವ ಹಿಜಾಬ್ ಕೇಸರಿ ವಿವಾದವು ದಿನ ಕಳೆದಂತೆ ಹೊಸ ಹೊಸ ಮಾರ್ಗದಲ್ಲಿ ಸಾಗುತ್ತಿದೆ.
ಜಿಲ್ಲೆಯ ಹಲವೆಡೆ ಹಿಜಾಬ್ ಹಾಗೂ ಕೇಸರಿ ಶಾಲಿನ ನಡುವೆ ಉಂಟಾದ ವಿವಾದವು ಚಿಕ್ಕಮಗಳೂರಿನ ಐ ಡಿ ಎಸ್ ಜಿ ಕಾಲೇಜಿಗೂ ವ್ಯಾಪಿಸಿತ್ತು. ನಿನ್ನೆ ಕಾಲೇಜಿನಲ್ಲಿ ಕೇಸರಿ ಶಾಲು, ಹಿಜಾಬ್ ಜೊತೆಗೆ ನೀಲಿ ಶಾಲುಗಳು ಕೂಡ ರಾರಾಜಿಸಿತ್ತು. ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು ನಿನ್ನೆ ಹಿಜಾಬ್ ಗೆ ಬೆಂಬಲ ಸೂಚಿಸಿದ್ದರು ಆದರೆ ಇಂದು ಹಲವು ವಿದ್ಯಾರ್ಥಿಗಳು ನೀಲಿ ಬಣ್ಣದ ಶಾಲಿನ ಜೊತೆಗೆ ಕೇಸರಿ ಶಾಲನ್ನು ಧರಿಸಿಕೊಂಡು ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇದನ್ನೂ ಓದಿ :ತಹಸೀಲ್ದಾರ್ ಅಂಬುಜಾ ಅಮಾನತಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ ; ಶಾಸಕ ಟಿ.ಡಿ ರಾಜೇಗೌಡ ಆರೋಪ
ವಿದ್ಯಾರ್ಥಿಗಳನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ನಾವೆಲ್ಲರೂ ಒಂದೇ, ಕಾಲೇಜಿನಲ್ಲಿ ಎಲ್ಲರೂ ಸಮಾನರು ಎಂದು ವಿದ್ಯಾರ್ಥಿಗಳು ಮಾತನಾಡಿದರು. ಜೈ ಭೀಮ್ - ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ನಾವೆಲ್ಲ ಒಂದೇ ಎಂದರು. ಹಿಜಾಬ್ ಹಾಗೂ ಕೇಸರಿ ಶಾಲಿನ ಕುರಿತಾಗಿ ರಾಜ್ಯದ ಅನೇಕ ಶಾಲಾ ಕಾಲೇಜುಗಳಲ್ಲಿ ವಾತಾವರಣ ಬಿಗಡಾಯಿಸಿದ್ದು ಸರ್ಕಾರ ಈ ವಿವಾದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕಿದೆ.
ಅಂಬೇಡ್ಕರ್ ಭಿತ್ತಿಪತ್ರ: ಧರ್ಮಕ್ಕಿಂತ ವಿದ್ಯೆ ಮುಖ್ಯ, ವಿದ್ಯಾಲಯದ ಆವರಣದಲ್ಲಿ ಜಾತಿ, ಧರ್ಮವನ್ನು ತರಬಾರದು ಎಂಬ ಅಂಬೇಡ್ಕರ್ ಅವರ ಹೇಳಿಕೆಯ ಭಿತ್ತಿಪತ್ರ ಹಿಡಿದು ಕೆಲವು ವಿದ್ಯಾರ್ಥಿಗಳು ನಿಂತಿದ್ದರು.


0 Comments