ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಜಯಪುರ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡುಗಾರಿನಲ್ಲಿ  ಚಿರತೆ ಎರಡು ಹಸುಗಳನ್ನು ತಿಂದುಹಾಕಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ದೇವಗೋಡು ಗ್ರಾಮದ ಕೆಮ್ಮಣ್ಣು, ಹಾಡುಗಾರು, ಕಿಬ್ಬಿ ಗ್ರಾಮಗಳಲ್ಲಿ  ನಿರಂತರವಾಗಿ ಜಾನುವಾರು, ನಾಯಿ ಮುಂತಾದ ಸಾಕು ಪ್ರಾಣಿಗಳು ನಾಪತ್ತೆಯಾಗುತ್ತಿತ್ತು, ಇದು ಚಿರತೆ ದಾಳಿಯೆಂದು ಜನರಿಗೆ ಈ ಹಿಂದೆ ತಿಳಿದಿರಲಿಲ್ಲ, ನಡಹಾಳಿಯ ಗಜೇಂದ್ರ ಎಂಬುವವರಿಗೆ ಸೇರಿದ ಎರಡು ಹಸುಗಳ ಕಳೇಬರ ದೊರೆತ ಬಳಿಕ ಚಿರತೆ ದಾಳಿಯ ಕುರಿತಾಗಿ ಸ್ಥಳೀಯರಿಗೆ ತಿಳಿದು ಬಂದಿದೆ.

ಇದನ್ನೂ ಓದಿ : ಅಕ್ರಮವಾಗಿ ಕಾಡುಹಂದಿ ಬೇಟೆಮಾಡಿ ಮಾಂಸ ಸಾಗಾಟ ನಡೆಸುತ್ತಿದ್ದ ಐವರ ಬಂಧನ ; ಪ್ರಕರಣ ದಾಖಲು

ತೋಟಗಳಲ್ಲಿ ಕೆಲಸ ಕಾರ್ಯ ಮಾಡುವ ಸಂದರ್ಭದಲ್ಲಿ ಕಾರ್ಮಿಕರಿಗೆ ಏನಾದರೂ ತೊಂದರೆ ಉಂಟಾದರೆ ಅಥವಾ ಸಾಕು ಪ್ರಾಣಿಗಳು ಈ ರೀತಿಯ ದಾಳಿಗೊಳಗಾಗಿ  ಅಸುನೀಗಿದರೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಕುರಿತು ಮಾಹಿತಿ ನೀಡಿರುವ ಇಲಾಖೆಯ ಅಧಿಕಾರಿಗಳು ಚಿರತೆಯು ಹಸುಗಳ ಮೇಲೆ ದಾಳಿ ಮಾಡಿರುವ ಕುರಿತಾಗಿ ನಮ್ಮ ಗಮನಕ್ಕೆ ಬಂದಿಲ್ಲ, ಕಾಡು ಪ್ರಾಣಿಯ ದಾಳಿಯಿಂದ ಹಸು ಮೃತಪಟ್ಟಿದೆ ಎಂದು ಪಶು ವೈದ್ಯರು ದೃಢಪಡಿಸಿದರೆ ಪರಿಹಾರ ದೊರಕಿಸಲಾಗುವುದು ಎಂದಿದ್ದಾರೆ.

ಅತೀ ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯ ಆಗಬೇಕು, ಹಾಗೂ ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.