ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಶಾರದಾಂಬಾ ದೇಗುಲಕ್ಕೆ ಇಂದು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರು ತಾಯಿಶಾರದೆಯ ದರ್ಶನ ಪಡೆದು ಶೃಂಗೇರಿಯ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಬೆಳಗ್ಗೆ ಪತ್ನಿ ಚೆನ್ನಮ್ಮ ಹಾಗೂ ಮಾಜಿ ಸಚಿವರಾದ ರೇವಣ್ಣ ಅವರೊಂದಿಗೆ ಶೃಂಗೇರಿಗೆ ಆಗಮಿಸಿದ ಹೆಚ್. ಡಿ ದೇವೇಗೌಡ ಅವರು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶ್ರೀಯುತ ಸುಧಾಕರ್ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ವಿಡಿಯೋ ನೋಡಿ :ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ದೇವೇಗೌಡರು ಈಗಲೂ ಪಕ್ಷ ಸಂಘಟನೆ ಮಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ ಪವಿತ್ರ ಕ್ಷೇತ್ರವಾದ ಶೃಂಗೇರಿಯ ಭಾಗದಲ್ಲಿ ಪಕ್ಷದ ಉಳಿವಿಗಾಗಿ ಹಾಗೂ ಜನರನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಸಲುವಾಗಿ ಎಂದರು. ಓರ್ವ ಸಾಮಾನ್ಯ ರೈತನ ಮಗನಾಗಿ ಮಾಡುವ ಕೆಲಸದಲ್ಲಿ, ಸಿಕ್ಕ ಸ್ಥಾನದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಅದಕ್ಕೆ ನನಗೆ ಹೆಮ್ಮೆಯಿದೆ, ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.

ಮಲೆನಾಡು ಭಾಗದ ಮುಖ್ಯ ಬೆಳೆಯಾದ ಕಾಫಿ ಕುರಿತು ಮಾತನಾಡಿದ ಅವರು ಕಾಫಿ ಬೆಳೆಗಾರರ ಕುರಿತಾಗಿ ನಾನು ನೀಡಿದ ಕೊಡುಗೆಯ ಕುರಿತು ಎಲ್ಲರೂ ಒಮ್ಮೆ ನಿಮ್ಮ ಹಿರಿಯರ ಜೊತೆಗೆ ಚರ್ಚಿಸಿ ಅವಲೋಕಿಸಿ ಎಂದು ನೆರೆದವರಿಗೆ ಹೇಳಿದರು,ರೈತಾಪಿ ವರ್ಗಕ್ಕೆ ನಾನು ನೀಡಿದ ಕೊಡುಗೆಯನ್ನು ಹಿಂದೂಸ್ಥಾನದ ಯಾವುದೇ ಪ್ರಧಾನಮಂತ್ರಿ ಮಾಡಲಾರ, ಅತ್ಯಂತ ಪ್ರಾಮಾಣಿಕವಾಗಿ ನಾನು ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ ಎಂದರು. ಜೆಡಿಎಸ್ ಪಕ್ಷವನ್ನು 2023 ರ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರವನ್ನು ತರುವುದು ನನ್ನ ಮುಂದಿನ ಗುರಿಯಾಗಿದೆ ಎಂದರು.

ಈ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಮಾಜಿ ಸಚಿವರಾದ ಹೆಚ್.ಡಿ ರೇವಣ್ಣ ಈ ಭಾಗದಲ್ಲಿ ಯಾರೂ ಕಲ್ಪಿಸಿರದ ರಸ್ತೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯಲ್ಲಿ ನಾನು ಸಚಿವನಾಗಿದ್ದಾಗ ಕಲ್ಪಿಸಿದ್ದೇನೆ ಶೃಂಗೇರಿಯ ವಿದ್ಯಾರಣ್ಯಪುರ ಸೇರಿದಂತೆ ಅನೇಕ ರಸ್ತೆಗಳನ್ನು ಹಾಗೂ ವಿದ್ಯುತ್ ಸಂಪರ್ಕವನ್ನು ಈ ಭಾಗದ ಜನರಿಗೆ ತಲುಪಿಸಿದ್ದೇವೆ ಜನಹಿತಕ್ಕೆ ಬೇಕಾಗುವ ಎಲ್ಲಾ ಕಾರ್ಯಗಳನ್ನು ಮಾಡುವುದು ನಮ್ಮ ನೇತೃತ್ವದ ಸರ್ಕಾರ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಮುಖಂಡರ ಜೊತೆಗೂಡಿ ಈ ಬಾರಿ ಸುಧಾಕರ್ ಶೆಟ್ಟಿ ಅವರನ್ನು ಗೆಲ್ಲಿಸಬೇಕು ಎಂದರು. 

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ಮೊದಲಿಗೆ ಮಲೆನಾಡು ಭಾಗದ ಸಮಸ್ಯೆಗಳನ್ನು ವಿಸ್ತಾರವಾಗಿ ತಿಳಿಸಿದರು. ನಂತರ ಪಕ್ಷ ಸಂಘಟನೆಯ ಕುರಿತು ಮಾತನಾಡಿದ ಅವರು ಈ ಭಾಗದಲ್ಲಿ ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ತನ್ಮೂಲಕ ಅಭಿವೃದ್ಧಿಗೆ ಪೂರಕವಾದ ಮನ್ನಣೆ ನೀಡಿ ಜನ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಬೇಕು ಎಂದರು. ರಾಷ್ಟ್ರೀಯ ಪಕ್ಷಗಳು ಕೇವಲ ಸುಳ್ಳು ಹಾಗೂ ಆರೋಪಗಳನ್ನು ಮಾಡುತ್ತಾ ಸಮಯವನ್ನು ಅಧಿಕಾರವನ್ನು ವ್ಯರ್ಥಮಾಡುತ್ತಲಿದೆ ಎಂದರು ಹಾಗೂ ಯಾವುದೇ ಕೆಲಸಗಳಿಗೆ ಶೃಂಗೇರಿ ಕೊಪ್ಪ ಭಾಗದ ಜನರು ಜಿಲ್ಲಾಕೇಂದ್ರ ಚಿಕ್ಕಮಗಳೂರಿಗೆ ಹೋಗಬೇಕಿದೆ ಆದಕಾರಣ ಶೃಂಗೇರಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಬೇಕೆಂದರು. 

ಈ ಸಭೆಯಲ್ಲಿ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡ ಮಾಜಿ ಪ್ರಧಾನಿಗಳು,ಹೆಚ್.ಡಿ ರೇವಣ್ಣರವರು ಮಾಜಿ ಸಚಿವರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ, ದಿವಾಕರ್ ಭಟ್,ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್,ರಾಜ್ಯ ನಾಯಕರಾದ ಹೆಚ್.ಜಿ ವೆಂಕಟೇಶ್,ಹೆಚ್.ಟಿ ರಾಜೇಂದ್ರರವರು ರಾಜ್ಯ ನಾಯಕರು,ಟಿ.ಟಿ ಕಳಸಪ್ಪ ಜಾತ್ಯಾತೀತ ಜನತಾದಳ ತಾಲೂಕು ಅಧ್ಯಕ್ಷರು,ಕಾರ್ಯದರ್ಶಿಗಳು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.