ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿನಡೆಸಿ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಮಲೆಮನೆ ಗುಡ್ಡದ ಅಕ್ರಮ ಕಳ್ಳಭಟ್ಟಿ ಅಡ್ಡೆಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಾಳೂರು ಠಾಣೆಯ ಪಿಎಸೈ ರೇಣುಕಾ ನೇತೃತ್ವದ ತಂಡ ಸುಮಾರು 25 ಕೊಡಗಳಲ್ಲಿ ತುಂಬಿಸಿಟ್ಟಿದ್ದ 400 ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತಾಗಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಳ್ಳಭಟ್ಟಿ ತಯಾರಿಕೆಗೆ ಬಳಸಿಕೊಂಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಅತೀ ಶೀಘ್ರವಾಗಿ ಬಂಧಿಸುವ ಸಲುವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಭಟ್ಟಿ ಮಾರಾಟದ ಕಡಿವಾಣಕ್ಕೆ ಆಗ್ರಹ :
ಈ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಕಳ್ಳಭಟ್ಟಿ ತಯಾರಿಕೆ ಹಾಗೂ ಮಧ್ಯ ಮಾರಾಟಕ್ಕೆ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಕಡಿವಾಣ ಹಾಕಬೇಕು, ಮಲೆನಾಡು ಭಾಗದ ಜನರ ಹಾಗೂ ಗ್ರಾಮಗಳ ನಡುವಿನ ಉತ್ತಮ ಒಡನಾಟ ಈ ರೀತಿಯ ಘಟನೆಗಳಿಂದಾಗಿ ಹಾಳಾಗುತ್ತದೆ ಮುಖ್ಯವಾಗಿ ಮದ್ಯಪಾನವು ಜನರ ಜೀವನವನ್ನು ನಾಶಗೊಳಿಸುತ್ತದೆ ಆ ಕಾರಣದಿಂದಾಗಿ ಈ ರೀತಿಯ ದುಷ್ಕೃತ್ಯಗಳನ್ನು ಎಸಗುತ್ತಿರುವ ಆರೋಪಿಗಳಿಗೆ ಆದಷ್ಟುಬೇಗ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments