ಕಳಸ : (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಜೈನ ಧರ್ಮದ ಕುರಿತಾಗಿ ಅವಹೇಳನ ಮಾಡುತ್ತಿರುವ ಹಾಗೂ ಜೈನ ಧರ್ಮೀಯರನ್ನು ನಿಂದಿಸುತ್ತಿರುವ ವ್ಯಕ್ತಿಗಳ ಮೇಲೆ ಕಠಿಣ ಶಿಕ್ಷೆ ಜಾರಿಯಾಗಬೇಕು ಹಾಗೂ ಈ ಕುರಿತು ಬಲವಾದ ಒಂದು ಕಾನೂನನ್ನು ಸರ್ಕಾರ ರೂಪಿಸಬೇಕೆಂದು ಆಗ್ರಹಿಸಿ ಕಳಸ ಹಾಗೂ ಸುತ್ತಮುತ್ತಲಿನ ಜೈನ ಧರ್ಮೀಯರು ಮೌನ ಮೆರವಣಿಗೆ ನಡೆಸಿದರು. 

ಇದನ್ನೂ ಓದಿ : ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ; ಕುಟುಂಬಕ್ಕೆ ಆಸರೆಯಾಗಬೇಕಿದ್ದ ಯುವಕ ಸಾವು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆಯ ಮೂಲಕ ಸಾಗಿದ ಜೈನ ಧರ್ಮೀಯರು ಮತ್ತು ಜೈನ ಧರ್ಮದ ಶ್ರೀ ಗಳಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಸಿಂಹನಗದ್ದೆ ಅವರ ಸಮ್ಮುಖದಲ್ಲಿ ಕಳಸದ ತಹಸೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು. 

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಕೆಲ ಕಿಡಿಗೇಡಿಗಳು ಸಾಮರಸ್ಯ ಕೆದಡುವ ರೀತಿಯಲ್ಲಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಸಲುವಾಗಿ ಜೈನ ಸಮಾಜದ ಕುರಿತಾಗಿ ಹಾಗೂ ಜೈನ ಧರ್ಮೀಯರ ಪದ್ಧತಿಯಲ್ಲಿನ ದಿಗಂಬರರ ಕುರಿತಾಗಿ ಅವಹೇಳನ ನಡೆಸುತ್ತಿದ್ದಾರೆ ಇದರಿಂದ ಜೈನ ಸಮುದಾಯಕ್ಕೆ ಅತೀವವಾದ ನೋವುಂಟಾಗಿದೆ ಎಂದು ಹಾಗೂ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಜೈನ ಸಮುದಾಯದವರು ಸರ್ಕಾರವನ್ನು ತಹಶೀಲ್ದಾರ್ ಅವರ ಮುಖಾಂತರವಾಗಿ ಇಂದು ಆಗ್ರಹಿಸಿದರು.

ಈ ಕುರಿತಾಗಿ ಮಾತನಾಡಿದ ಜೈನ ಸಮುದಾಯದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಜೈನ ಧರ್ಮ ಸಮಾಜಕ್ಕೆ ಶಾಂತಿ ಹಾಗೂ ನೆಮ್ಮದಿಯನ್ನು ಸಾರಿದ ಧರ್ಮ, ಇಂತಹ ಮಹೋನ್ನತ ಧರ್ಮದ ಕುರಿತಾಗಿ ಅನಗತ್ಯ ಹಾಗೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಲುವಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ. ಶಾಂತಿ ಹಾಗೂ ಸಹಬಾಳ್ವೆಗೆ ಜೈನ ಧರ್ಮ ಸದಾ ಒತ್ತು ನೀಡುತ್ತದೆ ಅಹಿಂಸಾ ಪರಮೋ ಧರ್ಮ ಎಂದು ಸಾರುವ ಧರ್ಮದ ಕುರಿತು ಹಾಗೂ ಜೈನ ಧರ್ಮದ ಆಚರಣೆಗಳ ಕುರಿತಾಗಿ ಅವಹೇಳನ ಮಾಡುವುದು ಸರಿಯಲ್ಲ ಈ ಕುರಿತು ಸರ್ಕಾರ ಗಮನ ಹರಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ನಂತರದಲ್ಲಿ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಮನವಿಯನ್ನು ಕಳಸದ ತಹಶೀಲ್ದಾರ್ ಅವರಿಗೆ ನೀಡಿ ಅತೀ ಶೀಘ್ರವಾಗಿ ಸ್ಪಂದನೆ ಮಾಡುವಂತೆ ಮನವಿ ಸಲ್ಲಿಸಿದರು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಹಶೀಲ್ದಾರ್ ಅವರು ಸರ್ಕಾರಕ್ಕೆ ಅತೀ ಶೀಘ್ರವಾಗಿ ಈ ಕುರಿತು ತಿಳಿಸುವುದಾಗಿ ಪ್ರತಿಕ್ರಿಯಿಸಿದರು.

ಈ ಬೃಹತ್ ಮೌನ ಮೆರವಣಿಗೆಯಲ್ಲಿ ಕಳಸ ಸೀಮೆಯ ಒಂಬತ್ತು ಬಸದಿಗಳಾದ ಮಲ್ಲೇಶ್ವರ, ಸಂಸೆ, ಎಳನೀರು, ಕಳಸ, ದೊಡ್ಮನೆ, ಶಾಂತಿಗಿರಿ, ಚಿಕ್ಕನಕೊಡಿಗೆ, ಬಲಿಗೆ ಮತ್ತು ಮೇಗುಂದ ಬಸದಿಗಳ ಪದಾಧಿಕಾರಿಗಳು ಮತ್ತು ಜೈನ ಧರ್ಮೀಯರು ಭಾಗವಹಿಸಿದ್ದರು.