ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಾದ್ಯಂತ ನಡೆಯುತ್ತಿರುವ ಕೇಸರಿ ಮತ್ತು ಹಿಜಾಬ್ ನಡುವಿನ ವಿವಾದ ದಿನೇ ದಿನೇ ತೀವ್ರತರವಾಗಿ ಸಾಗುತ್ತಿದ್ದು ಜಿಲ್ಲೆಯಲ್ಲೂ ಆತಂಕ ಸೃಷ್ಟಿ ಮಾಡಿರುವ ಕಾರಣ ಯಾವುದೇ ರೀತಿಯ ಅಹಿತಕರ ಘಟನೆಗಳು ಜಿಲ್ಲೆಯ ಯಾವುದೇ ಶಾಲಾ-ಕಾಲೇಜುಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾದ್ಯಂತ ಶಾಲಾ-ಕಾಲೇಜುಗಳ ವ್ಯಾಪ್ತಿಗೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
ಹಿಜಾಬ್ ಧರಿಸುವ ವಿಚಾರವಾಗಿ ಒಂದಿಲ್ಲೊಂದು ಗೊಂದಲಗಳ ಜೊತೆಗೆ ವಿವಾದವೂ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ರ ಅಡಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಇದನ್ನೂ ಓದಿ : ಜೈನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಕಳಸ ಸುತ್ತಮುತ್ತಲಿನ ಜೈನ ಧರ್ಮೀಯರಿಂದ ಬೃಹತ್ ಮೌನ ಮೆರವಣಿಗೆ
ದಿನಾಂಕ 16 ಫೆಬ್ರವರಿ ಬುಧವಾರದ ಸಂಜೆ 06 ಘಂಟೆಯಿಂದ ದಿನಾಂಕ 23.02.2022 ರ ಸಂಜೆ 06 ಗಂಟೆಯ ವರೆಗೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ಸುತ್ತಮುತ್ತಲಿನ 200ಮೀಟರ್ ವ್ಯಾಪ್ತಿಗೆ ನಿಷೇದಾಜ್ಞೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಿಷೇಧಿತ ಪ್ರದೇಶಕ್ಕೆ ಯಾರಾದರೂ ತೆರಳಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡಿದಲ್ಲಿ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೆ ಗುರಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಲಾ-ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಗೂಡುವುದು, ಅನಗತ್ಯವಾಗಿ ಸಂಚರಿಸುವುದು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ಗಲಭೆ ಸೃಷ್ಟಿಸುವುದು, ಪ್ರತಿಭಟನೆ ಮಾಡುವುದು, ರ್ಯಾಲಿ ನಡೆಸುವುದು, ವಿಜಯೋತ್ಸವ ಗಳನ್ನು ಆಚರಿಸುವುದು, ಪಟಾಕಿ ಸಿಡಿಸುವುದು ಮುಂತಾದ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು ಯಾರಾದರೂ ಕಾನೂನಿನ ಉಲ್ಲಂಘನೆ ಮಾಡಿ ನಿಯಮವನ್ನು ಮೀರಿದ್ದಲ್ಲಿ ತೀವ್ರತರವಾದ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಒಗ್ಗಟ್ಟಾಗಿ, ಸೌಹಾರ್ದಯುತವಾಗಿ ಇರಬೇಕಾಗಿದ್ದ ವಿದ್ಯಾ ಮಂದಿರಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಅತೀವ ಗೊಂದಲವನ್ನುಂಟು ಮಾಡಿದೆ.

0 Comments