ಶೃಂಗೇರಿ:(ನ್ಯೂಸ್ ಮಲ್ನಾಡ್ ವರದಿ) ಮಕ್ಕಳ ತಜ್ಞರ ಅಲಭ್ಯತೆ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹಸುಗೂಸೊಂದು ಸಾವನ್ನಪ್ಪಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿಯ ಬೇಗಾರಿನ ಸತೀಶ್ ಹಾಗೂ ಅಕ್ಷತಾ ದಂಪತಿಗೆ ನೆನ್ನೆ ಅಷ್ಟೇ ಮಗು ಆಗಿದ್ದು, ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಡೆಲಿವರಿ ಮಾಡಲಾಗಿದೆ, ಆದರೆ ಹೃದಯ ಬಡಿತದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಶೃಂಗೇರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಉಪಕರಣಗಳು ಇಲ್ಲದ ಕಾರಣ ವೈದ್ಯರು ಮಣಿಪಾಲ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಆದರೆ ಸುಮಾರು ನೂರು ಕಿಲೋಮೀಟರ್ ದೂರದ ಮಣಿಪಾಲ ಆಸ್ಪತ್ರೆಗೆ ತಲುಪುವ ಮುನ್ನವೇ ಹಸುಗೂಸು ಸಾವನ್ನಪ್ಪಿದೆ.
ಇದನ್ನೂ ಓದಿ :ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪಿಗಳ ಬಂಧನ ; ನಗದು ವಶ, ಪ್ರಕರಣ ದಾಖಲು
ಶೃಂಗೇರಿಗೆ ನೇಮಕವಾಗಿ ಎರಡನೇ ದಿನದಲ್ಲಿ ಮಕ್ಕಳ ತಜ್ಞರ ವರ್ಗಾವಣೆ: ಕಳೆದ ಒಂದು ವಾರದ ಹಿಂದೆ ಶೃಂಗೇರಿ ಆಸ್ಪತ್ರೆಗೆ ಮಕ್ಕಳ ತಜ್ಞರ ನೇಮಕವಾಗಿದ್ದು ಆದರೆ ನೇಮಕವಾಗಿ ಎರಡೇ ದಿನದಲ್ಲಿ ವೈದ್ಯರನ್ನು ಕೊಪ್ಪ ಆಸ್ಪತ್ರೆಗೆ ಡೆಪ್ಯುಟೇಶನ್ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿತ್ತು. ಮಕ್ಕಳ ತಜ್ಞರು ಇದ್ದಲ್ಲಿ ಮಗು ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಈ ಕುರಿತು ಡಿಎಚ್ಓ ಅವರನ್ನು ಕೇಳಿದಾಗ ಕೊಪ್ಪದಲ್ಲಿ ಕೋವಿಡ್ ಆಸ್ಪತ್ರೆಗಾಗಿ ವರ್ಗಾ ಮಾಡಲಾಗಿದೆ ಎಂದಿದ್ದರು. ಆದರೆ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಶೃಂಗೇರಿ ಆಸ್ಪತ್ರೆಗೆ ನೇಮಿಸುವಂತೆ ಕೇಳಿಕೊಳ್ಳಲಾಗಿತ್ತು.
ಶೃಂಗೇರಿಗೆ ವೈದ್ಯರ ನೇಮಕಾತಿ ವಿಷಯದಲ್ಲಿ ಜನಪ್ರತಿನಿಧಿಗಳು, ಡಿಎಚ್ಓ ಬೇಜವಾಬ್ದಾರಿತನ:
ಶೃಂಗೇರಿಗೆ ವೈದ್ಯರ ನೇಮಕಾತಿ ವಿಷಯದಲ್ಲಿ ಶೃಂಗೇರಿ ತಾಲೂಕಿನ ಜನಪ್ರತಿನಿಧಿಗಳು ತಮಗೆ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ, ಆದರೆ ತಮ್ಮ ಅಕ್ರಮಗಳಿಗೆ ಸಹಕರಿಸದವರನ್ನು ಟ್ರಾನ್ಫರ್ ಮಾಡುವುದರಲ್ಲಿ, ತಮ್ಮ ಕೆಲಸ ಮಾಡಿಕೊಡುವವರನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಇವರು ನಿಸ್ಸೀಮರು.
ಇನ್ನು ಡಿಎಚ್ಓ ವೈದ್ಯರ ನೇಮಕಾತಿ ವಿಚಾರದಲ್ಲಿ ಬೇಜವಾಬ್ದಾರಿತನ ತೋರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಶೃಂಗೇರಿಗೆ ವಾರದಲ್ಲಿ ಎರಡು ದಿನ ಕಣ್ಣಿನ ವೈದ್ಯರು ಹಾಗೂ ಕಣ್ಣು ಕಿವಿ ಮೂಗಿನ ತಜ್ಞರನ್ನು ನೇಮಕ ಮಾಡುವಂತೆ ಕೇಳಿಕೊಂಡಿದ್ದಾಗ ಮುಂದಿನ ವಾರದಿಂದ ನೇಮಕ ಮಾಡುವುದಾಗಿ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಇನ್ನು ಶೃಂಗೇರಿ ನೂರು ಬೆಡ್ ಆಸ್ಪತ್ರೆ ಕಡತ ತಯಾರಿ ವಿಷಯದಲ್ಲಿ ಮೊದಲಿನಿಂದಲೂ ತಮಗೆ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರುವುದು ಸಹ ಸತ್ಯದ ವಿಚಾರ.
ಈ ಮಗುವಿನ ಸಾವಿಗೆ ಶೃಂಗೇರಿಯ ಜನಪ್ರತಿನಿಧಿಗಳು ಹಾಗೂ ಡಿಎಚ್ಓ ಕಾರಣ, ಶೃಂಗೇರಿಗೆ ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಯಾವುದೇ ಜನಪ್ರತಿನಿಧಿಗಳು ಸಹಕರಿಸುತ್ತಿಲ್ಲ, ಆದರೆ ಅಕ್ರಮ ವ್ಯವಹಾರಗಳಲ್ಲಿ ಅತಿಯಾದ ಆಸಕ್ತಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶೃಂಗೇರಿಗೆ ವೈದ್ಯರ ನೇಮಕಾತಿಗೆ ಒತ್ತಾಯಿಸಲಾಗುತ್ತಿದೆ ಕನಿಷ್ಠ ಒಂದೊಂದು ದಿನ ಕೊಪ್ಪದಿಂದ ವೈದ್ಯರನ್ನು ನಿಯೋಜನೆಗೊಳಿಸುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂ ರಾಜಕೀಯ ಕಾರ್ಯದರ್ಶಿಗಳು, ವಿಧಾನ ಪರಿಷತ್ ಸದಸ್ಯರನ್ನು ಕೇಳಿಕೊಂಡಿದ್ದೆವು ಆದರೆ ಯಾರೂ ಪರಿಹಾರ ಒದಗಿಸಿಲ್ಲ, ಬಹುಶಃ ವೈದ್ಯರು ಇದ್ದರೆ ಬದುಕುಳಿಯುವ ಸಾಧ್ಯತೆ ಇದ್ದಿತು, ಹಾಗಾಗಿ ಜನಪ್ರತಿನಿಧಿಗಳು ಹಾಗೂ ಡಿಎಚ್ಓ ಈ ಸಾವಿಗೆ ಹೊಣೆ ಹೊರಬೇಕು..
ಕಳೆದ ಕೆಲವು ದಿನಗಳ ಹಿಂದೆ ಶೃಂಗೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಳೆ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಲಾಗಿತ್ತು, ಹೋರಾಟ ಸಮಿತಿ ಈ ಬಗ್ಗೆ ಶಾಸಕರ ಮುಖೇನ ಕೇಳಿಕೊಂಡು, ಮೂಳೆ ತಜ್ಞರು ಹಾಗೂ ಕಣ್ಣಿನ ವೈದ್ಯರನ್ನು ವಾರದಲ್ಲಿ ಎರಡು ದಿನ ನೇಮಿಸುವಂತೆ ಒತ್ತಾಯಿಸಿತ್ತು. ಶಾಸಕರು ಡಿಎಚ್ಓ ಗೆ ಕರೆ ಮಾಡಿ ಈ ಕುರಿತು ಸೂಚನೆ ಸಹ ನೀಡಿದ್ದರು ಅದಾಗಿ ಒಂದು ತಿಂಗಳು ಕಳೆದರೂ ಕಣ್ಣಿನ ತಜ್ಞರ ನೇಮಕವಾಗಿಲ್ಲ. ಆ ನಂತರ ಎರಡು ಬಾರಿ ಶಾಸಕರಿಗೆ ಹಾಗೂ ಡಿಎಚ್ಓ ಗೆ ಫಾಲೋಅಪ್ ಮಾಡಲಾಗಿದೆ. ಆದರೆ ಡಿಎಚ್ಓ ತಕ್ಷಣವೇ ನೇಮಕ ಮಾಡುವುದಾಗಿ ಹೇಳುತ್ತಿದ್ದಾರಾದರೂ ನೇಮಕ ಮಾತ್ರ ಮಾಡುತ್ತಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತಕ್ಕೆ ಸಾಕ್ಷಿಯಾಗಿದೆ. ಶೃಂಗೇರಿ ಜನರು ಅಂಗವಿಕಲತೆ ಸರ್ಟಿಫಿಕೇಟ್ ಗೆ ಸಹಿಗಾಗಿ ಸಹ ಕೊಪ್ಪಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ.
ಹಾಗೆಯೇ ನೂರು ಬೆಡ್ ಆಸ್ಪತ್ರೆಗೆ ಹಲವು ತೊಡಕುಗಳಿಂದ ವಿಳಂಬವಾಗುತ್ತಿದೆ, ಆದರೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ನಾಯಕರು ಈ ಬಗ್ಗೆ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ನಾಟಕಗಳಿಗೆ ಮುಂದಿನ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜನರು ಉತ್ತರಿಸುತ್ತಾರೆ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಎಚ್ಚರಿಸಿದೆ.

0 Comments