ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಷ್ಯಾ ಉಕ್ರೇನ್ ದೇಶದ ಮೇಲೆ ಸಾರಿರುವ ಯುದ್ಧವು ತೀವ್ರತರವಾಗಿದ್ದು ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಉಕ್ರೇನ್ ನಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಅದರಲ್ಲಿ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಗಳೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಯುದ್ಧದ ಕಾರ್ಮೋಡ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವೆ ಕವಿದಿದ್ದು ವಿದ್ಯಾಭ್ಯಾಸದ ನಿಮಿತ್ತ ಉಕ್ರೇನ್ ನಲ್ಲಿರುವ ಭಾರತದ ಅನೇಕ ವಿದ್ಯಾರ್ಥಿಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆ ತರಬೇಕೆಂದು ವಿದ್ಯಾರ್ಥಿಗಳ ಪೋಷಕರು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಇದನ್ನೂ ಓದಿ : ನ್ಯೂಸ್ ಮಲ್ನಾಡ್ FACT CHECK : ಕೇರಳದ IPS ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆಯೇ? ಇಲ್ಲಿದೆ ವೈರಲ್ ವಾಟ್ಸಾಪ್ ಸ್ಟೇಟಸ್ ಗಳ ಹಿಂದಿನ ಅಸಲಿ ಕಥೆ

ವಿದ್ಯಾಭ್ಯಾಸದ ನಿಮಿತ್ತ ತೆರಳಿರುವ ವಿದ್ಯಾರ್ಥಿಗಳನ್ನು ಆದಷ್ಟು ಶೀಘ್ರವಾಗಿ ಹಾಗೂ ಸುರಕ್ಷಿತವಾಗಿ ಕರೆತರಬೇಕು, ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಆತಂಕದಲ್ಲಿ ದಿನಕಳೆಯುವಂತಾಗಿದೆ ಎಂದು ಪೋಷಕರು ಅಳಲನ್ನು ಹೊರಹಾಕಿದ್ದಾರೆ. 

ಕಡೂರಿನ ಇಂಚರ, ವೈಭವ್ ಶ್ರೀನಿವಾಸ್ ನಾಡಿಗ್, ಪ್ರದ್ವಿನ್, ಹೆಚ್.ಕೆ ಮನೋಜ್, ಅರುಣ್ ಕುಮಾರ್, ತನುಜಾ ಎಂಬ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿರುವ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಗಳು. ಇವರಲ್ಲಿ ಪ್ತದ್ವಿನ್ ಉಕ್ರೇನ್ ನ ಖಾರ್ಕೀವ್ ಇಂಟರ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಕಡೂರು ಮೂಲದ ಇಂಚರ ಎಂಬ ವಿದ್ಯಾರ್ಥಿನಿ ವೈದ್ಯಕೀಯ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು ಫೆಬ್ರವರಿ 28 ರಂದು ತಾಯ್ನಾಡಿಗೆ ಆಗಮಿಸುವ ಸಲುವಾಗಿ ವಿಮಾನದ ಟಿಕೆಟ್ ಬುಕ್ ಮಾಡಿದ್ದರು ಆದರೆ ಏರ್ಪೋರ್ಟ್ ಬ್ಲಾಸ್ಟ್ ಆದ ಕಾರಣ ಟಿಕೆಟ್ ರದ್ದಾಗಿದೆ ಹಾಗೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾಳೆ. ಹಾಸ್ಟೆಲ್ ನ ಹೊರಗೆ ಭಾರೀ ಸ್ಫೋಟದ ಸದ್ದು ಕೇಳಿಸುತ್ತಿದೆ. ಹೊರ ಬರಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. 

ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮಾಹಿತಿ ಪಡೆಯುತ್ತಿದ್ದು ವಿದ್ಯಾರ್ಥಿಗಳನ್ನು ಹಾಗೂ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.