ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷ ಹಿಂದೂ ಎಂಬ ಯುವಕನ ಕೊಲೆಯ ಹಿಂದಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. 

ನಿನ್ನೆ ರಾತ್ರಿ ಚಿಕ್ಕಮಗಳೂರಿನ ಹಿಂದೂ ಐಕ್ಯತಾ ವೇದಿಕೆಯಡಿಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಓಂಕಾರೇಶ್ವರ ಗಣಪತಿ ದೇವಾಲಯದಿಂದ ಅಜಾದ್ ಪಾರ್ಕ್ ವರೆಗೆ ಪಂಜಿನ ಮೆರವಣಿಗೆ ನಡೆಸಿದರು, ಮೃತ ಹರ್ಷನ ಪರವಾದ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯ ಉದ್ದಕ್ಕೂ ಸಾಗಿದರು ಹಾಗೂ ಆದಷ್ಟು ಶೀಘ್ರವಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. 

ಇದನ್ನೂ ಓದಿ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಖಾಸಿಫ್, ಸಯ್ಯದ್ ನದೀಂ ಬಂಧನ ಉಳಿದ ಆರೋಪಿಗಳಿಗೆ ಬಲೆ ಬೀಸಿದ ಖಾಕಿ

ಕಳಸದಲ್ಲೂ ಪ್ರತಿಭಟನೆ ಮಾಡಿದ ಬಜರಂಗದಳದ ಕಾರ್ಯಕರ್ತರು ರಸ್ತೆತಡೆ ನಡೆಸಿದರು. ಕಳಸದ ಆಂಜನೇಯ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೆಲ ಸಮಯ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹರ್ಷನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು ನಂತರದಲ್ಲಿ ಆರೋಪಿಗಳ ಶೀಘ್ರ ಬಂಧನಕ್ಕಾಗಿ ಹಾಗೂ ಕಠಿಣ ಶಿಕ್ಷೆಗೆ ಆಗ್ರಹಿಸಿ ಕುದುರೆಮುಖ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು. 

ಅತೀ ಶೀಘ್ರವಾಗಿ ನಮ್ಮ ಕಾರ್ಯಕರ್ತ ಹರ್ಷನನ್ನು ಕೊಲೆಗೈದ ಪಾಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿ ಸರ್ವಸ್ವವನ್ನೂ ಧರ್ಮಕ್ಕಾಗಿ ಪಣಕ್ಕಿಡುವ ಕಾರ್ಯಕರ್ತರ ಹಿತಕಾಯಬೇಕು - ಆರ್.ಡಿ ಮಹೇಂದ್ರ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಾಪುರ ತಾಲೂಕಿನ ಬಜರಂಗದಳದ ಕಾರ್ಯಕರ್ತರು ನಿನ್ನೆ ರಸ್ತೆತಡೆ ಮಾಡಿ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಕೊಲೆಗೈದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಜರಂಗದಳದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ರಾಜ್ಯದ ಹಾಗೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಹರ್ಷನ ಸಾವಿಗೆ ನ್ಯಾಯ ಒದಗಿಸಿಬೇಕೆಂದು ಪ್ರತಿಭಟನೆ ನಿರಂತರವಾಗಿ ನಡೆಯುತ್ತಲೇ ಇದೆ.