ಶಿವಮೊಗ್ಗದ ಸೀಗೆಹಟ್ಟಿ ಯ ಯುವಕ ಹರ್ಷ ಹಿಂದೂ ಎಂಬ ಯುವಕನನ್ನು ಮೊನ್ನೆ ರಾತ್ರಿಯವೇಳೆಗೆ ರಸ್ತೆಯ ಬದಿಯಲ್ಲೇ ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಆತನ ಕೊಲೆಯ ನಂತರದಲ್ಲಿ ಇಡೀ ಶಿವಮೊಗ್ಗ ಹೊತ್ತಿ ಉರಿದಿತ್ತು, ಎಲ್ಲೆಡೆಯೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹರ್ಷನ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸುವಾಗ ಅಲ್ಲಲ್ಲಿ ಕಲ್ಲುತೂರಾಟಗಳು ನಡೆದಿತ್ತು, ಮನೆಯಿಂದ ಆತನ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಾಗ ಸಾಕಷ್ಟು ಕಡೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು.
ಇದನ್ನೂ ಓದಿ : 50 ಬಾಕ್ಸ್ ಅಡುಗೆ ಎಣ್ಣೆ ಕಳ್ಳತನ ನಡೆಸಿದ್ದ ಖತರ್ನಾಕ್ ಕಳ್ಳನನ್ನು ಸೆರೆ ಹಿಡಿದ ಪೊಲೀಸರು.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮೊದಲಿಗೆ ಲಘು ಲಾಠಿಪ್ರಹಾರ ನಡೆಸಿದರು ಬಳಿಕ ಅಶ್ರುವಾಯು ಪ್ರಯೋಗ ಮಾಡಿದರು ಆದರೆ ಯಾವುದಕ್ಕೂ ಜನರು ಬಗ್ಗದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಲು ಯತ್ನಿಸಿದರು.
ಆರೋಪಿಗಳನ್ನು ಸೆರೆ ಹಿಡಿಯಲು ನಿನ್ನೆಯಿಂದ ಬಲೆ ಬೀಸುತ್ತಿದ್ದ ಖಾಕಿ ಪಡೆ ಮೂವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಶಿವಮೊಗ್ಗ ಮೂಲದ ಅಫ್ನಾನ್, ಖಾಸೀಫ್, ಹಾಗೂ ನದೀಂ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮಾಹಿತಿ ಕಲೆ ಹಾಕುತ್ತಿದ್ದು ಈ ಕೃತ್ಯದ ಹಿಂದೆ ಯಾರಿದ್ದಾರೆ, ಘಟನೆಗೆ ಕಾರಣಗಳೇನು, ಎಂಬ ಸಂಪೂರ್ಣ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.
ನಿನ್ನೆ ಶಿವಮೊಗ್ಗದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯು ಇಂದು ಕೊಂಚ ಮಟ್ಟಿನ ನಿಯಂತ್ರಣಕ್ಕೆ ಬಂದಿದೆ. ಕೆಲವೆಡೆ ಬೂಧಿ ಮುಚ್ಚಿದ ಕೆಂಡದಂತೆ ಇದ್ದು ಶಿವಮೊಗ್ಗದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲಲ್ಲಿ ಪೊಲೀಸರು ವಾಹನ ಹಾಗೂ ವ್ಯಕ್ತಿಗಳ ತಪಾಸಣೆಯನ್ನು ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ವಿಧಿಸಿದ್ದು ಶಾಲಾ ಕಾಲೇಜುಗಳಿಗೆ ಇಂದೂ ಕೂಡ ರಜೆ ಘೋಷಣೆ ಮಾಡಲಾಗಿದೆ.

0 Comments