ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮೂರು ತಿಂಗಳ ಹಿಂದೆ ಸೆರೆಯಾಗಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಇಂದು ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಗೆ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಯನ್ನು ಇಂದು ಕರೆತಂದು ವಿಚಾರಣೆ ನಡೆಸಲಾಗಿದೆ. ಈ ಹಿಂದೆ ಕೇರಳ ಪೊಲೀಸರು ಸುಲ್ತಾನಬತ್ತೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನನ್ನು ಬಂಧಿಸಿದ್ದರು. ಶೃಂಗೇರಿ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ಕೃಷ್ಣಮೂರ್ತಿ ಮೇಲೆ ಇರುವ ಕಾರಣ ಇಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ನರಸಿಂಹರಾಜಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂಬ ಮಾಹಿತಿ ದೊರೆತಿದೆ. ಅವರನ್ನು ಠಾಣೆಗೆ ಕರೆತರುವ ಸಂದರ್ಭದಲ್ಲಿ ಶೃಂಗೇರಿ ಪೊಲೀಸ್ ಠಾಣೆಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
Related News: (December) ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣು
ಮಲೆನಾಡು ಭಾಗದಲ್ಲಿ ನಡೆದಿರುವ ಅನೇಕ ಪ್ರಕರಣಗಳಲ್ಲಿ ಬಿ.ಜಿ ಕೃಷ್ಣಮೂರ್ತಿ ಅವರ ಹೆಸರು ಕೇಳಿಬಂದಿತ್ತು ಈ ಹಿನ್ನೆಲೆ ಇಂದು ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯ ಹಾದಿ
► 2002ರ ನವೆಂಬರ್‌ನಲ್ಲಿ ಕೊಪ್ಪದ ಮೆಣಸಿನಹಾಡ್ಯದಲ್ಲಿ ನಕ್ಸಲರ ತರಬೇತಿ ನಡೆಯುತ್ತಿದ್ದಾಗ ಆಕಸ್ಮಿಕ ಗುಂಡು ಹಾರಾಟ, ಚೀರಮ್ಮ ಎಂಬ ವೃದ್ಧೆಗೆ ಗಾಯ.
► 2003ರ ಆ.6ರಂದು ಕುದುರೆಮುಖ ಸಮೀಪದ ಸಿಂಗ್ಸಾರ್ ಗ್ರಾಮದಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಪ್ರಥಮ ಗುಂಡಿನ ಚಕಮುಖಿ.
► 2003ರ ನ.17ರಂದು ಈದು ಬಳಿಯ ಬಲ್ಯೋಟ್ಟು ಎನ್‌ಕೌಂಟರ್‌ಗೆ ನಕ್ಸಲ್ ಗುಂಪಿನ ಪಾರ್ವತಿ ಹಾಗೂ ಹಾಜಿಮ ಬಲಿ.
► 2005 ಫೆ.6ರಂದು ಕೊಪ್ಪ ತಾಲೂಕಿನ ಮೆಣಸಿನ ಹಾಡ್ಯ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್ ಹಾಗೂ ಆತನ ಸಹಚರ ಶಿವಲಿಂಗು ಹತ್ಯೆ.
► 2005ರ ಮೇ 17ರಂದು ಪೊಲೀಸ್ ಮಾಹಿತಿದಾರ ಎಂಬ ಆರೋಪದಲ್ಲಿ ನಕ್ಸಲರಿಂದ ಗಿರಿಜನ ಮುಖಂಡ ಶೇಷಯ್ಯ ಎಂಬವರ ಹತ್ಯೆ.
► 2005ರ ಜೂ.23ರಂದು ಶಂಕರನಾರಾಯಣ ವ್ಯಾಪ್ತಿಯ ದೇವರಬಾಳು ಸಮೀಪ ರಾಮನಹಕ್ಲು ಬಳಿ ಎನ್‌ಕೌಂಟರ್. ಘಟನೆಯಲ್ಲಿ ಮೂಡಿಗೆರೆ ತಾಲೂಕಿನ ಉಮೇಶ್, ಬೆಳಗಾವಿಯ ಅಜಿತ್ ಕುಸುಬಿ ಹತ್ಯೆ.
► 2006ರ ಡಿ.26ರಂದು ರಾತ್ರಿ ಶೃಂಗೇರಿ ತಾಲೂಕಿನ ಕೆಸಮುಡಿ ಬಳಿಯ ಎನ್‌ಕೌಂಟರ್‌ಗೆ ನಾರಾವಿಯ ಕುತ್ಲೂರಿನ ಯುವಕ ದಿನಕರ ಬಲಿ.
► 2007ರ ಜುಲೈ 1ರಂದು ಶಿವಮೊಗ್ಗ ಜಿಲ್ಲೆಯ ಹೊಸಗದ್ದೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ.
► 2007ರ ಜೂನ್ 3ರಂದು ಪೊಲೀಸ್ ಮಾಹಿತಿದಾರ ಎಂಬ ಆರೋಪದ ಮೇಲೆ ಶೃಂಗೇರಿ ತಾಲೂಕಿನ ಕೆಸಮುಡಿ ವೆಂಕಟೇಶನ ಹತ್ಯೆ
► 2007ರ ಜುಲೈ 10ರಂದು ಮೆಣಸಿನಹಾಡ್ಯ ಬಳಿಯ ಮೇಗೂರು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಹಾಗೂ ಅವರ ಬೆಂಬಲಿಗರು ಸೇರಿ ಐವರ ಹತ್ಯೆ. ಗೌತಮ್, ಪರಮೇಶ್, ಸುಂದರೇಶ್, ರಾಮೇಗೌಡ್ಲು ಹಾಗೂ ಕಾವೇರಿ ಎಂಬವರು ಸಾವು.
► 2007ರ ಅಕ್ಟೋಬರ್ 7 ರಂದು ಪೊಲೀಸ್ ಕಾನ್‌ಸ್ಟೇಬಲ್ ಅಪಹರಿಸಿ ಬಿಡುಗಡೆ. ಪೊಲೀಸರ ಬಂದೂಕು ಹೊತ್ತೊಯ್ದ ನಕ್ಸಲರು.
► 2008ರ ಮೇ 15ರಂದು ಚುನಾವಣೆ ಮುನ್ನಾದಿನ ಸೀತಾನದಿ ಬಳಿಯ ನಾಡ್ಪಾಲು ಎಂಬಲ್ಲಿ ನಕ್ಸಲರಿಂದ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಚಿಕ್ಕಮ್ಮನ ಮಗ ಸುರೇಶ್ ಶೆಟ್ಟಿ ಹತ್ಯೆ.
► 2008 ನ.19ರಂದು ಕಳಸ- ಹೊರನಾಡು ರಸ್ತೆಯ ಮಾವಿನಹೊಳೆ ಬಳಿ ನಡೆದ ಮುಖಾಮುಖಿಯಲ್ಲಿ ಎಎನ್‌ಎಫ್ ಯೋಧ ಗುರುಪ್ರಸಾದ್ ಹುತಾತ್ಮ. ಮನೋಹರ, ನವೀನ ಸೇರಿ ಮೂವರು ನಕ್ಸಲರ ಹತ್ಯೆ.
► 2008ರ ಡಿ. 7ರಂದು ಹಳ್ಳಿಹೊಳೆ ಕೃಷಿಕ ಕೇಶವ ಎಂಬವರು ನಕ್ಸಲ್ ದಾಳಿಗೆ ಬಲಿ.
► 2010ರ ಮಾರ್ಚ್ 1ರಂದು ಅಂಡಾರು ಗ್ರಾಮದ ಮುನಿಯಾಲು ಮುಟ್ಲುಮಾಡಿ ಸಮೀಪ ಮೈರೋಳಿ ಜಡ್ಡು ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಕತ್ಲೂರಿನ ವಸಂತ ಗೌಡ ಹತ್ಯೆ.
► 2010ರ ಡಿ.10ರಂದು ಶಂಕರನಾರಾಯಣ ಪೊಲೀಸರಿಂದ ನಕ್ಸಲ್ ಮುಖಂಡ ಶೇಖರ್ ಯಾನೆ ರಂಜಿತ್ ಯಾನೆ ಪ್ರೇಮ್ ಎಂಬಾತನ ಬಂಧನ.
► 2011ರ ಅ.8ರ ಮಧ್ಯರಾತ್ರಿ ಎಎನ್‌ಎಫ್ ಯೋಧ ಮಹಾದೇವ ಮಾನೆ ಪೊಲೀಸರದ್ದೇ ಗುಂಡಿಗೆ ಬಲಿ.
► 2011ರ ಡಿ.19ರಂದು ಮಲೆಕುಡಿಯ ಜನಾಂಗದ ಪೊಲೀಸ್ ಮಾಹಿತಿದಾರನಾಗಿದ್ದ ಕಬ್ಬಿನಾಲೆ ಸದಾಶಿವ ಗೌಡ ಎಂಬವರ ಅಪಹರಣ, ಬಳಿಕ ಬರ್ಬರ ಹತ್ಯೆ.
► 2012ರ ಮಾ.10ರಂದು ಬೆಳ್ತಂಗಡಿಯ ಕೊಲ್ಲಿ ಸಮೀಪ ನಕ್ಸಲ್ ಪೊಲೀಸ್ ನಡುವೆ ಗುಂಡಿನ ಕಾಳಗ.
► 2012ರ ಮಾ.11ರಂದು ಬೆಳ್ತಂಗಡಿ ಗ್ರಾಮದ ಮಲವಂತಿಕೆ ಗ್ರಾಮದ ಉರ್ದ್ಯಾರ್ ಫಾಲ್ಸ್ ಬಳಿ ನಕ್ಸಲರಿಗೆ ಸೇರಿದ ಭಾರಿ ಪ್ರಮಾಣದ ಶಸ್ತ್ರಾಸ್ತ ವಶ.
► 2012 ಸೆ.4ರಂದು ರಾತ್ರಿ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಗ್ರಾಮದ ಚೇರು ಮೀಸಲು ಅರಣ್ಯ ಪ್ರದೇಶದಲ್ಲಿ ಎಎನ್‌ಎಫ್ ಯೋಧರಿಂದ ನಕ್ಸಲ್ ಸದಸ್ಯನ ಹತ್ಯೆ.
► 2014 ಡಿ. 5ರಂದು ಶೃಂಗೇರಿ ಮೂಲದ ಕುಖ್ಯಾತ ನಕ್ಸಲ್ ಸಿರಿಮನೆ ನಾಗರಾಜ್ ಹಾಗೂ ಚಿತ್ರದುರ್ಗದ ನೂರ್ ಜುಲ್ಫಿಕರ್ ಚಿಕ್ಕಮಗಳೂರಿನಲ್ಲಿ ಶರಣಾಗತಿ.
► 2016 ನ.14 ರಾಯಚೂರು ಮೂಲದ ರಿಜ್ವಾನ್ ಬೇಗಂ ಅಲಿಯಾಸ್ ಕಲ್ಪನಾ, ರಿಜ್ವಾನ್ ಬೇಗಂ ಪತಿ ರಾಜು, ನಿಲ್ಗುಳಿ ಪದ್ಮನಾಭ, ಭಾರತೀ ಪೊಲೀಸರಿಗೆ ಶರಣಾಗತರಾಗಿದ್ದರು.
► 2017 ಜೂ. 6ರಂದು ಚಿಕ್ಕಮಗಳೂರಿನ ಅಂದಿನ ಎಸ್ಪಿ ಅಣ್ಣಾಮಲೈ ಸಮ್ಮುಖದಲ್ಲಿ A ಕ್ಯಾಟಗರಿಯ ನಕ್ಸಲ್ ಕನ್ಯಾಕುಮಾರಿ, ಶಿವು ಹಾಗೂ ಚನ್ನಮ್ಮ ಶರಣಾಗತಿಯಾಗಿದ್ದರು. ಕನ್ಯಾಕುಮಾರಿ ಮೇಲೆ ವಿವಿಧ ಠಾಣೆಯಲ್ಲಿ ಸುಮಾರು 33 ಕೇಸ್ ಗಳಿದ್ದವು.
► 2018ರ ನ.19 ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ತಂದೆಯ ನಿಧನ. ಈ ಸಂದರ್ಭದಲ್ಲೂ ಕೂಡ ಬಿ.ಜಿ ಕೃಷ್ಣಮೂರ್ತಿ ತಂದೆಯ ಅಂತಿಮ ದರ್ಶನ ಪಡೆಯಲು ಅಗಮಿಸಿರಲಿಲ್ಲ. ಅವರ ಆಗಮನದ ನಿರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಂತ ಪೊಲೀಸರು ಕೂಂಬಿಂಗ್ ನಡೆಸಿ ಕಟ್ಟೆಚ್ಚರ ವಹಿಸಿದ್ದರು.
► 2021 ನ. 09 ಕೇರಳದ ಸುಲ್ತಾನ್ ಬತ್ತೇರಿ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ನಾಯಕ ಬಿ. ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಬಂಧಿಲಾಗಿತ್ತು.

0 Comments