ಶಿವಮೊಗ್ಗ (ನ್ಯೂಸ್ ಮಲ್ನಾಡ್ Fact Check): ಬಜರಂಗದಳ ಕಾರ್ಯಕರ್ತ ಸೀಗೆಹಟ್ಟಿ ಹರ್ಷ ಹತ್ಯೆ ಬಳಿಕ ಶಿವಮೊಗ್ಗದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇದರ ಬೆನ್ನಲ್ಲೇ ಕೇರಳದ ಪೊಲೀಸ್ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಕರ್ನಾಟಕದ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.
ಬಜರಂಗದಳ ಕಾರ್ಯಕರ್ತ ಹರ್ಷ ಸಾವಿನ ಬೆನ್ನಲ್ಲೇ ಶಿವಮೊಗ್ಗ ಹೊತ್ತಿ ಉರಿದಿತ್ತು. ಈಗಾಗಲೇ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಚರಣೆಯ ಮೂಲಕ 8 ಜನ ಆರೋಪಿಗಳನ್ನು ಬಂಧಿಸಿದ್ದು, ಇನ್ನು ಗಲಭೆ ನಡೆಸಿದವರಿಗೆ ಖಾಕಿ ಬಲೆ ಬೀಸಿದೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಫೇಕ್ ನ್ಯೂಸ್ ಗಳು ಹರಿದಾಡುತ್ತಿವೆ.
ಯತೀಶ್ ಚಂದ್ರ ಐಪಿಎಸ್ ಅವರ ವರ್ಗಾವಣೆ ನಿಜಾನಾ?
ಯತೀಶ್ ಚಂದ್ರ ಮೂಲತಃ ನಮ್ಮ ಕರ್ನಾಟಕದ ದಾವಣಗೆರೆಯವರು. ಕೇರಳದ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಧ್ಯ ಇಂಟರ್ ಕೇಡರ್ ಡೆಪ್ಯೂಟೇಶನ್ ಮೇರೆಗೆ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸಿದ ಬಳಿಕೆ ಮತ್ತೆ ಕೇರಳಕ್ಕೆ ತೆರಳಲಿದ್ದಾರೆ. ಖಡಕ್ ಲುಕ್, ಸಿಂಘಂ ಸ್ಟೈಲ್ ನಲ್ಲಿ ಬೆಂಡೆತ್ತುತ್ತಿರುವ ವೀಡಿಯೋಗಳನ್ನು ಎಡಿಟ್ ಮಾಡಿ ‘ಕೇರಳದ ದಕ್ಷ ಅಧಿಕಾರಿ ಯತೀಶ್ ಚಂದ್ರ ಶಿವಮೊಗ್ಗಕ್ಕೆ ವರ್ಗಾವಣೆ’ ಎಂಬಿತ್ಯಾದಿ ಬರಹ ಹಾಕಿದ ಸ್ಟೇಟಸ್ ವಾಟ್ಸಾಪ್ ನಲ್ಲಿ ವೈರಲ್ ಆಗುತ್ತಿದ್ದು ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ನ್ಯೂಸ್ ಮಲ್ನಾಡ್ ಗೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಸರ್ಕಾರದಿಂದಲೂ ಯಾವುದೇ ಅಧಿಕೃತ ಅದೇಶಗಳನ್ನೂ ಹೊರಡಿಸಿಲ್ಲ ಪ್ರಸ್ತುತ ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ. ಎಂ ಲಕ್ಷ್ಮಿ ಪ್ರಸಾದ್ ಅವರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಪೋಸ್ಟ್ ಗಳನ್ನೆಲ್ಲಾ ನಂಬುವ ಮೊದಲು ಅದು ಅಧಿಕೃತ ಸುದ್ದಿ ಸಂಸ್ಥೆಯಿಂದ ಪ್ರಕಟವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ.

0 Comments