ಶಿವಮೊಗ್ಗ (ನ್ಯೂಸ್ ಮಲ್ನಾಡ್ Fact Check) ಹಿಜಾಬ್ Vs ಕೇಸರಿ ಶಾಲು ವಿವಾದ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಶಿವಮೊಗ್ಗ ನಗರದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎನ್ನಲಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಸುದ್ದಿ ಹಿಂದಿನ ಸತ್ಯಾಸತ್ಯತೆ ತಿಳಿದುಬಂದಿದೆ.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಕೇಸರಿ ಶಾಲು ಮತ್ತು ಹಿಜಾಬ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರೆ ನೋಡ ನೋಡುತ್ತಿದ್ದಂತೆ ಧ್ವಜಸ್ಥಂಭ ಏರಿದ ವಿದ್ಯಾರ್ಥಿಯೊಬ್ಬ ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗೆ ತಕ್ಷಣವೇ ಧ್ವಜ ಕೆಳಗಿಳಿಸುವಂತೆ ಸೂಚಿಸಿದ್ದಾರೆ. ಅದರಂತೆ ವಿದ್ಯಾರ್ಥಿ ಧ್ವಜವನ್ನು ಕೆಳಗಿಳಿಸಿ ಕೆಳಗಿಳಿದಿದ್ದಾನೆ.
ಆದರೆ ಇದನ್ನು ಕೆಲ ಮಾಧ್ಯಮಗಳು ಧ್ವಜಾರೋಹಣಕ್ಕೆ ಮೀಸಲಿದ್ದ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ವರದಿ ಬಿತ್ತರಿಸಿದ್ದವು. ಅಲ್ಲದೇ ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಟ್ವೀಟ್ ಮಾಡಿ ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದಿದ್ದರು.
ಆದರೆ, ಈ ಕುರಿತು ಸ್ವತಃ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಸ್ಪಷ್ಟೀಕರಣ ನೀಡಿದ್ದು, ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಪ್ರಕಟಿಸಲಾಗಿದೆ. ಪ್ರತಿದಿನ ಇಲ್ಲಿ ಧ್ವಜಾರೋಹಣ ಮಾಡಲಾಗುವುದಿಲ್ಲ. ಕೇಸರಿ ಧ್ವಜ ಹಾರಿಸಿದ ಸಮಯದಲ್ಲಿ ಅಲ್ಲಿ ಯಾವುದೇ ಧ್ವಜ ಹಾರಾಡುತ್ತಿರಲಿಲ್ಲ ಎಂದು ಹೇಳಿದೆ. ಅಲ್ಲದೇ ತಕ್ಷಣ ಅದೇ ವಿದ್ಯಾರ್ಥಿಗಳು ಕೇಸರಿ ಧ್ವಜವನ್ನು ತೆಗೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಬಿಜೆಪಿಯ ಜೊತೆ ಕೈಜೋಡಿಸಿರುವ ಕೆಲ ದೇಶದ್ರೋಹಿಗಳು ಶಿವಮೊಗ್ಗದ ಕಾಲೇಜಿನಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಅಪಮಾನ ಮಾಡಿದ್ದಾರೆ. ಇದನ್ನು ಪ್ರತಿಭಟಿಸಿ ಪ್ರತಿಯೊಬ್ಬರೂ ಕೂಡ ರಾಷ್ಟ್ರಧ್ವಜದೊಡನೆ ತಮ್ಮ ಭಾವಚಿತ್ರವನ್ನು ಪೋಸ್ಟ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.#MyTricolourMyPride
— DK Shivakumar (@DKShivakumar) February 8, 2022
ಶಿವಮೊಗ್ಗದಲ್ಲಿ 2 ದಿನ ನಿಷೇಧಾಜ್ಞೆ ಜಾರಿ
ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಎರಡು ದಿನಗಳ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿಕಾರಿಪುರ ಪಟ್ಟಣದಲ್ಲಿ ಉದ್ರಿಕ್ತ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದು, ಬಸ್ನ ಗಾಜುಗಳು ಪುಡಿಪುಡಿಯಾಗಿವೆ. ಶಿಕಾರಿಪುರ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗ ಈ ಘಟನೆ ನಡೆದಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಸಹ ಘೋಷಣೆ ಘೋಷಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್ ಆದೇಶ ಹೊರಡಿಸಿದ್ದಾರೆ.

0 Comments