ಕೊಡಗು : ( ನ್ಯೂಸ್ ಮಲ್ನಾಡ್ ವರದಿ) ಸಂಸದ ಪ್ರತಾಪ್ ಸಿಂಹ ಅವರ ಹಿಜಾಬ್ ಕುರಿತಾದ ಹೇಳಿಕೆಯನ್ನು ಖಂಡಿಸಿ ಕೊಡಗು ಎಸ್ಡಿಪಿಐ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹರವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ, ಸಂಪೂರ್ಣವಾಗಿ ವಿಷಯವನ್ನರಿತು ನಂತರ ಹೇಳಿಕೆ ನೀಡಬೇಕಿತ್ತು ನೀಡಿರುವ ಹೇಳಿಕೆಯನ್ನು ಈ ಕೂಡಲೇ ಸಂಸದರು ಹಿಂಪಡೆದು ಕ್ಷಮೆ ಯಾಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಾಪ್ ಸಿಂಹಅವರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಡಿಕೇರಿಯ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು, ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಮುಸ್ತಾಫ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ್ ಸಿಂಹ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಇದು ಸರಿಯಲ್ಲ, ಪದವಿಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಒಮ್ಮೆ ಅವರು ತಿಳಿದುಕೊಳ್ಳಬೇಕಾಗುತ್ತದೆ, ವಸ್ತ್ರ ಸಂಹಿತೆಯ ಕುರಿತಾದ ಉಲ್ಲೇಖವನ್ನು ಇನ್ನೊಮ್ಮೆ ಮನನ ಮಾಡಿಕೊಂಡು ನಂತರದಲ್ಲಿ ಈ ಕುರಿತು ಮಾತನಾಡಬೇಕು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದರು.  

ಇದನ್ನೂ ಓದಿ :ನಿವೇಶನ ರಹಿತರಿಗೆ ಆಶ್ರಯ ಕಲ್ಪಿಸುವ ಸಲುವಾಗಿ ಅರ್ಜಿ ಆಹ್ವಾನ

ಸಮವಸ್ತ್ರದ ಕುರಿತಾಗಿ ಅವರು ಮಾತನಾಡುತ್ತಿರುವುದು ಇಲ್ಲಿನ ಕೋಮು ದೃಢೀಕರಣಕ್ಕಾಗಿ ಹಾಗೂ ಮತ ಪಡೆಯಲು ಮತ್ತು ಅವರ ನಾಯಕರುಗಳನ್ನು ಓಲೈಸಲು ಎಂದು ವಾಗ್ದಾಳಿ ನಡೆಸಿದರು. ಅವರ ಹೇಳಿಕೆಯ ಕುರಿತಾಗಿ ಮುಸ್ಲಿಂ ಸಮುದಾಯ ಹಾಗೂ ಎಸ್ಡಿಪಿಐ ಕಾರ್ಯಕರ್ತರು ಬಗ್ಗುವುದಿಲ್ಲ ಬದಲಾಗಿ ಪ್ರಶ್ನಿಸುತ್ತಾರೆ ಎಂದರು.

ಪ್ರತಾಪ್ ಸಿಂಹರವರು ಭಾರತವು ಹಿಂದೂಗಳ ದೇಶ ಎಂದಿದ್ದಾರೆ ಆದರೆ ಇದು ಹಿಂದುಗಳ ದೇಶವಲ್ಲ ಬದಲಾಗಿ ಪ್ರಜಾಪ್ರಭುತ್ವ, ಸಂವಿಧಾನ ಹೊಂದಿರುವ ದೇಶ ಹಾಗೂ ಜಾತ್ಯಾತೀತತೆಯನ್ನು ಸಾರುವ ದೇಶ ಈ ನಿಟ್ಟಿನಲ್ಲಿ ಅವರ ಹೇಳಿಕೆಯ ಕುರಿತಾಗಿ ಕ್ಷಮೆಯಾಚಿಸಬೇಕು ಎಂದರು. 

ಈ ಸಂದರ್ಭದಲ್ಲಿ ಎಸ್ಡಿಪಿಐ ಮಹಿಳಾ ಘಟಕದ ಪ್ರಮುಖರಾದ ರಸೀನ, ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಶಫಿ, ಮನ್ಸೂರ್ ಅಲಿ, ಕ್ರಿಯೇಟಿವ್ ಕಲೀಲ್, ಅಬ್ದುಲ್ ಅಸ್ಗರ್, ನಫಿಯಾ ಮುಂತಾದವರು ಹಾಜರಿದ್ದರು.