ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ನೂರು ಬೆಡ್ ಹೊಂದಿರುವ ಸುಸಜ್ಜಿತವಾದ ಆಸ್ಪತ್ರೆ ಶೀಘ್ರವಾಗಿ ನಿರ್ಮಾಣವಾಗಬೇಕೆಂದು ಕೋರಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್ ಬೊಮ್ಮಾಯಿ ಅವರಿಗೆ ಪತ್ರದ ಮುಖೇನ ಕೋರಿದ್ದಾರೆ. 

ಇದನ್ನೂ ಓದಿ : ಅಕ್ರಮ ಕಳ್ಳಭಟ್ಟಿ ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಬೇಕೆಂದು 2007 ರಲ್ಲಿ ಸರ್ಕಾರ ಘೋಷಿಸಿತ್ತು ಈ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗದ ಅವಶ್ಯಕತೆಯಿದ್ದು ಈ ಜಾಗವನ್ನು ಹೊಂದಿಸಲು ಸಾವಿರಾರು ಎಕರೆ ಪ್ರದೇಶವನ್ನು ಹೊಂದಿರುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಒಬ್ಬರ ಮೇಲೊಬ್ಬರಂತೆ ಕೆಸರೆರಚಾಟ ನಡೆಸುತ್ತಿದೆ. ಈ ಕುರಿತು ಸರ್ಕಾರ ಅತೀ ಶೀಘ್ರವಾಗಿ ಚಿಂತನೆ ನಡೆಸಿ ಜನರ ಆರೋಗ್ಯ ಸಲುವಾಗಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. 

ಮಲೆನಾಡು ಭಾಗದ ಜನರು ಮುಖ್ಯವಾಗಿ ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ ವಿಷಸರ್ಪ ಕಚ್ಚಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಲಭಿಸದೆ ಮೃತಪಟ್ಟ ಅನೇಕ ನಿದರ್ಶನಗಳಿವೆ ಅಂತೆಯೇ ಅಪಘಾತವಾದಾಗ, ಮರದಿಂದ ಬಿದ್ದಾಗ, ತುರ್ತು ಸಮಯದಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆಯ ಅವಶಕ್ಯತೆಯಿದ್ದಾಗ ಶೃಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಶಿವಮೊಗ್ಗ ಮಣಿಪಾಲದ ಕಡೆಗೆ ತೆರಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆಯೇ ಸಾವನ್ನಪ್ಪುತ್ತಾರೆ. ಸಾರ್ವಜನಿಕರಿಗೆ ಅತ್ಯಾವಶ್ಯಕವಾಗಿರುವ ಆಸ್ಪತ್ರೆಯು ಮೂಲಭೂತವಾಗಿದ್ದು ಈ ಕುರಿತು ಹೆಚ್ಚಿನ ಗಮನಹರಿಸಿ ಆದಷ್ಟು ಬೇಗ ಜಾಗ ಮಂಜೂರಾತಿ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. 

ಈ ಹಿಂದೆ ಶೃಂಗೇರಿಯ ಸಾರ್ವಜನಿಕರು 100 ಬೆಡ್ ಗಳ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಶೃಂಗೇರಿ ಬಂದ್ ಗೆ ಕರೆ ನೀಡಿ ಬಂದ್ ನಡೆಸಿದ್ದರು ಆದರೆ ಅಂದು ಸ್ಥಳಕ್ಕೆ ಬಂದು ಕೆಲ ದಿನಗಳಲ್ಲಿ ಜಾಗ ಮಂಜೂರಾತಿ ಮಾಡುವ ಭರವಸೆ ನೀಡಿದ್ದ ಉಪವಿಭಾಗಾಧಿಕಾರಿ ಡಾ. ನಾಗರಾಜ್ ಅವರ ಭರವಸೆಗಳು ಕೇವಲ ಭರವಸೆಯಾಗಿ ಉಳಿದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಶೃಂಗೇರಿಯಲ್ಲಿ 100 ಬೆಡ್ ಆಸ್ಪತ್ರೆ ಎಂದಿಗೆ ನಿರ್ಮಾಣವಾಗುವುದೋ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.