ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ವಿವಾದ ಭುಗಿಲೆಬ್ಬಿಸಿ ಅನೇಕ ದಿನಗಳ ಕಾಲ ಶಾಲಾ ಕಾಲೇಜುಗಳು ಮುಚ್ಚುವಂತೆ ಮಾಡಿದ್ದ ಹಿಜಾಬ್ ವಿವಾದದ ತೀರ್ಪು ದಿನಾಂಕ 15.03.2022 ರಂದು ಪ್ರಕಟವಾಗುವ ಹಿನ್ನೆಲೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. 


ಜಿಲ್ಲಾಧಿಕಾರಿಗಳ ಆದೇಶದಂತೆ ಕೋಮು ಸೂಕ್ಷ್ಮ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ಹಿಜಾಬ್ ಕುರಿತಾದ ತೀರ್ಪಿನಿಂದ ಕೋಮು ಗಲಭೆ, ಶಾಂತಿ ಭಂಗ, ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಈ ರೀತಿಯ ಘಟನೆಗಳು ನಡೆಯುವ ಸಂಭವ ಇರುವ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜಿಲ್ಲೆಯಾದ್ಯಂತ ದಿನಾಂಕ 15.03.2022 ರಿಂದ 21.03.2022 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.

ಆದೇಶದ ಅನ್ವಯ ಶಾಲಾ-ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಗೂಡುವುದು, ಅನಗತ್ಯವಾಗಿ ಸಂಚರಿಸುವುದು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ಗಲಭೆ ಸೃಷ್ಟಿಸುವುದು, ಪ್ರತಿಭಟನೆ ಮಾಡುವುದು, ರ್ಯಾಲಿ ನಡೆಸುವುದು, ವಿಜಯೋತ್ಸವ ಗಳನ್ನು ಆಚರಿಸುವುದು, ಪಟಾಕಿ ಸಿಡಿಸುವುದು ಮುಂತಾದ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು ಯಾರಾದರೂ ಕಾನೂನಿನ ಉಲ್ಲಂಘನೆ ಮಾಡಿ ನಿಯಮವನ್ನು ಮೀರಿದ್ದಲ್ಲಿ ತೀವ್ರತರವಾದ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಜನರು ಕೋಮು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ ಹಾಗೂ ಸುವ್ಯವಸ್ಥೆಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಾಗೂ ನಿಬಂಧನೆಗಳನ್ನು ಮೀರಿದವರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೆ ಗುರಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.