ಸಾಗರ : (ನ್ಯೂಸ್ ಮಲ್ನಾಡ್ ವರದಿ) 21 ಕ್ವಿಂಟಾಲ್ ಅಡಿಕೆ ಕಳ್ಳತನ ನಡೆಸಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ : ಹುತಾತ್ಮ ಯೋಧ ಅಲ್ತಾಫ್ ಅಹಮದ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಂಸದ ಪ್ರತಾಪ್ ಸಿಂಹ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಲವಾಟ ಗ್ರಾಮದಲ್ಲಿ ಮನೆಯ ಸಮೀಪವಿದ್ದ ಖಾಲಿ ಜಾಗದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಫೆಬ್ರವರಿ 2ರಂದು ಕಳ್ಳರು ಕದ್ದಿದ್ದರು. ಈ ಕುರಿತು ಪೊಲೀಸರಿಗೆ ದೂರು ಸಹ ನೀಡಲಾಗಿತ್ತು. 

ದೂರಿನ ಅನ್ವಯ ಕಳ್ಳರ ಜಾಲವನ್ನು ಪತ್ತೆ ಮಾಡಲು ಕಾರ್ಯಾಚರಣೆಗಿಳಿದಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಭಟ್ಕಳದ ಫೈರೋಜ್ ಖಾನ್,ಭಟ್ಕಳದ ಉಸ್ಮಾನ್ ನಗರದ ಹಬೀಬ್ ಖಾನ್, ದೇವಿನಗರದ ಮಹಮದ್ ಮರ್ದಾನ್, ತಗ್ಗರ್ ಗೋಡ್ ನ ರುಮಾನ್ ಎಂದು ಗುರುತಿಸಲಾಗಿದೆ. 

ಆರೋಪಿಗಳಿಂದ 23 ಕ್ವಿಂಟಾಲ್ ಸಿಪ್ಪೆಗೋಟು ಅಡಿಕೆ ಹಾಗೂ ಒಂದು ಬೊಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಅವರ ದುಷ್ಕೃತ್ಯಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.

ಮಲೆನಾಡು ಭಾಗದ ಅನೇಕ ರೈತಾಪಿ ವರ್ಗದವರ ಮನೆಯಲ್ಲಿ ಖದೀಮರು ಅಡಿಕೆ, ಕಾಳುಮೆಣಸು ಕದ್ದೊಯ್ದ ಪ್ರಕರಣಗಳು ಈಗಾಗಲೇ ದಾಖಲಾಗಿದ್ದು ಈ ಸಂಬಂಧ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ.