ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭೆಯ 37 ನೆ ಬಜೆಟ್ ಇಂದು ಘೋಷಣೆಯಾಗಿದ್ದು ಈ ಬಜೆಟ್ ನ್ನು ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ಮಂಡನೆ ಮಾಡಿದರು.
ಈ ಬಾರಿಯ 37ನೆ ಬಜೆಟ್ ನ ಹಣ 236 ಲಕ್ಷ ರೂಪಾಯಿಗಳಾಗಿದ್ದು ನಗರಸಭೆಯ ಆದಾಯವನ್ನು ಈ ವರ್ಷ ಹೆಚ್ಚಿಸುವ ಸಲುವಾಗಿ ನಗರಸಭೆ ಹೆಚ್ಚಿನ ಗುರಿಯನ್ನು ಹೊಂದಿದೆ ಎಂದು ನಗರಸಭೆಯ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ತಿಳಿಸಿದರು, ಈ ಕುರಿತು ಮಾತನಾಡಿದ ಅವರು ಈ ಬಾರಿ ಆಸ್ತಿ ತೆರಿಗೆಯಿಂದ 900 ಲಕ್ಷ ರೂಪಾಯಿ ಹಣದ ಸಂಗ್ರಹಣೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ 200 ಲಕ್ಷ ಅಭಿವೃದ್ದಿ ಶುಲ್ಕ 100 ಲಕ್ಷ, ಹಾಗೂ ಕಟ್ಟಡ ಪರವಾನಿಗೆ ಬಾಬ್ತು 75 ಲಕ್ಷದ ಸಂಗ್ರಹಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ತನ್ಮೂಲಕ ನಗರಸಭೆಯ ಆದಾಯವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದರು.
ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಆಕರ್ಷಕ ದ್ವಾರದ ನಿರ್ಮಾಣ :
ಚಿಕ್ಕಮಗಳೂರು ನಗರ ಪ್ರವೇಶಿಸುವ ಸ್ಥಳದಲ್ಲಿ ಆಕರ್ಷಕವಾದ ದ್ವಾರವನ್ನು ನಿರ್ಮಾಣ ಮಾಡಿ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸುಂದರವಾದ ನಗರದ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.
94ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ:
ಪಟ್ಟಣದಲ್ಲಿ ಅನೇಕ ವರ್ಷಗಳಿಂದ ವಾಸವಿದ್ದು ಸಮರ್ಪಕವಾದ ದಾಖಲೆಯನ್ನು ಹೊಂದಿರದವರುಗೆ ಹಾಗೂ ಅರ್ಹ ಫಲಾನುಭವಿಗಳಿಗೆ 94 ಸಿ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡುವ ಕುರಿತಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಘೋಷಿಸಿದರು.
ಶಬ್ದ ಮಾಲಿನ್ಯ ತಡೆಗೆ ಮೈಕ್ ನಿಷೇಧ :
ನಿಯಮ ಬಾಹಿರವಾಗಿ ಕೋರ್ಟ್ ಆದೇಶವನ್ನೂ ಮೀರಿ ಧಾರ್ಮಿಕ ಕ್ಷೇತ್ರಗಳಲ್ಲಿ ಅಳವಡಿಕೆ ಮಾಡಿರುವ ಮೈಕ್ ಗಳ ತೆರವು ಕಾರ್ಯಾಚರಣೆ ಮಾಡಿ ಈ ಮೂಲಕ ಉಂಟಾಗುತ್ತಿರುವ ಶಬ್ದಮಾಲಿನ್ಯವನ್ನು ತಡೆಯಲಾಗುವುದು ಹಾಗೂ ಮೈಕ್ ಗಳಿಗೆ ನಿಷೇಧ ಹೇರಲಾಗುವುದು ಎಂದು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ನಗರದ ಯೋಜನೆ :
ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸಲುವಾಗಿ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಮೇಲೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ನಡೆ ಜನತೆಯ ಕಡೆ :
ಜನರ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಹಾಗೂ ನಡೆಯಬೇಕಿರುವ ಅಭಿವೃದ್ದಿ ಕಾರ್ಯಗಳ ಕುರಿತು ಜನರ ಸಲಹೆ ಪಡೆಯುವ ನಿಟ್ಟಿನಲ್ಲಿ ವಾರಕ್ಕೊಂದು ವಾರ್ಡ್ ಮಟ್ಟದಲ್ಲಿ ಜನ ಸಂಪರ್ಕ ಸಭೆ,ನಗರಸಭೆಯ ನಡೆ ಜನತೆಯ ಕಡೆ ಎಂಬ ಹೊಸ ಯೋಜನೆಯ ಮೂಲಕ ಜನರನ್ನು ತಲುಪುವುದು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ :
ಜನರಿಗೆ ಸ್ವಚ್ಚ ಹಾಗೂ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡುವ ಸಲುವಾಗಿ ನಗರಸಭೆಯ ಎಲ್ಲಾ ಕಾರ್ಮಿಕರ ಜೊತೆಗೂಡಿ ವಾರಕ್ಕೆರಡು ವಾರ್ಡ್ ಗಳನ್ನು ಆಯ್ಕೆಮಾಡಿಕೊಂಡು ಸ್ವಚ್ಛತಾ ಕಾರ್ಯಕ್ರಮಗಳನ್ನ ನಡೆಸಿ ತನ್ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆಯೆಡೆಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಹೂವಿನ ಮಾರುಕಟ್ಟೆ ಹಾಗೂ ಪತ್ರಿಕೆ ವಿತರಕರಿಗೆ ಸ್ಥಳ:
ಚಿಕ್ಕಮಗಳೂರಿನ ಕೆ.ಎಂ ರಸ್ತೆಯಲ್ಲಿ ಪತ್ರಿಕೆ ವಿತರಕರಿಗೆ ಹಾಗೂ ಹೂವಿನ ಮಾರುಕಟ್ಟೆ ನಿರ್ಮಾಣಕ್ಕಾಗಿ ನಗರಸಭೆ ನಿವೇಶನದಲ್ಲಿ ಸ್ಥಳವನ್ನು ನಿಗದಿ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಹೈಟೆಕ್ ವಾಣಿಜ್ಯ ಸಂಕೀರ್ಣ ಮತ್ತು ಸಮರ್ಪಕ ಪಾರ್ಕಿಂಗ್ ಲಾಟ್ ವ್ಯವಸ್ಥೆ :
ಎಂ.ಜಿ ರಸ್ತೆಯಲ್ಲಿರುವ ನಗರಸಭೆಯ ಮುಸಾಫಿರ್ಖಾನ್ ಜಾಗದಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ಹಾಗೂ ಪಾರ್ಕಿಂಗ್ ಲಾಟ್ ನಿರ್ಮಾಣಕಾರ್ಯ ನಡೆಸಲಾಗುವುದು ಈ ಮೂಲಕ ನಗರದ ವಾಣಿಜ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗುವುದು ಎಂದರು.
ಬಯೋಗ್ಯಾಸ್ ಮೂಲಕ ಇಂಧನ ಉತ್ಪತ್ತಿ :
ಚಿಕ್ಕಮಗಳೂರು ನಗರದ ಕಸ ವಿಲೇವಾರಿಯಿಂದ ಉತ್ಪಾದನೆ ಆಗುವ ಬಯೋ ಗ್ಯಾಸ್ ಹಾಗೂ ಬಯೋ ಇಂಧನವನ್ನು ಉತ್ಪತ್ತಿಮಾಡಿ ಕಛೇರಿಯ ವಾಹನಗಳಿಗೆ ಇದರ ಇಂಧನವನ್ನು ಪೂರೈಕೆ ಮಾಡುವ ಹೊಸ ಪರಿಸರ ಸ್ನೇಹಿ ಯೋಜನೆ ರೂಪುಗೊಂಡಿದೆ.
ಶುದ್ಧಗಂಗಾ ಕುಡಿಯುವ ನೀರಿನ ಘಟಕದ ನಿರ್ಮಾಣ :
ಚಿಕ್ಕಮಗಳೂರು ನಗರದ 10 ಸ್ಥಳಗಳಲ್ಲಿ ಕುಡಿಯುವ ನೀರಿಗಾಗಿ ಶುದ್ಧ ಗಂಗಾ ಘಟಕದ ನಿರ್ಮಾಣ ಮಾಡಿ ಶುದ್ಧ ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು ಈ ನಿಟ್ಟಿನಲ್ಲಿ ಈ ಕಾರ್ಯ ಅನುಕೂಲಕರವಾಗಲಿದೆ ಎಂದರು.
ಶೌಚಾಲಯಗಳ ನಿರ್ಮಾಣ :
ಚಿಕ್ಕಮಗಳೂರು ನಗರದಲ್ಲಿ ನೂತನವಾಗಿ 08 ಶೌಚಾಲಯಗಳ ನಿರ್ಮಾಣ ಮಾಡುವುದಾಗಿ ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಸೈಕಲ್ ಟ್ರ್ಯಾಕ್ ನಿರ್ಮಾಣ, ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ, ಗೋವುಗಳಿಗೆ ಮೇವು, ಸ್ಕೈ ವಾಕ್, ಫುಡ್ ಕೋರ್ಟ್ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡು ಚಿಕ್ಕಮಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಬಜೆಟ್ ಘೋಷಣೆಯ ವೇಳೆ ನಗರಸಭಾ ಅಧಿಕಾರಿಗಳು, ನಗರಸಭಾ ಸದಸ್ಯರು ಸೇರಿದಂತೆ ಸಾರ್ವಜನಿಕರು ನಗರಸಭೆಯ ಅವರಣದಲ್ಲಿದ್ದರು.


.jpeg)
.jpeg)
.jpeg)

0 Comments