ಕೊಟ್ಟಿಗೆಹಾರ : (ನ್ಯೂಸ್ ಮಲ್ನಾಡ್ ವರದಿ) ಕಾಳುಮೆಣಸು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಗುಂಡಿ ಆಮ್ತಿ ಗ್ರಾಮದ ಆವಂತಿ ಎಸ್ಟೇಟ್ ನಲ್ಲಿ ಕೈಚಳಕ ತೋರಿದ್ದ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆವಂತಿ ಎಸ್ಟೇಟ್ ನ ತೋಟದಲ್ಲಿ ಬಳ್ಳಿಯಿಂದ 500 ಕೆಜಿ ಗಳಷ್ಟು ಕಾಳುಮೆಣಸನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಸೆರೆ ಹಿಡಿದಿದ್ದಾರೆ. ಕಾಳುಮೆಣಸು ಕಳುವಾಗಿರುವ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಾಬ್ಲ ಅಲಿಯಾಸ್ ನವೀನ್, ನಾಗರಾಜ್ ಹಾಗೂ ವಿನ್ಸಿ ಎಂಬ ಮೂವರನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯು ಬಾಳೂರು ಪಿಎಸ್ಐ ರೇಣುಕಾ ಅವರ ನೇತೃತ್ವದಲ್ಲಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜಾಫರ್, ಮಹೇಶ್ ಮತ್ತು ವೈಭವ್ ಪಾಲ್ಗೊಂಡಿದ್ದರು.
ಮಲೆನಾಡು ಭಾಗದಲ್ಲಿ ಕಾಳುಮೆಣಸು ಕಳ್ಳರ ಹಾವಳಿ ಹೆಚ್ಚುತ್ತಿದ್ದು ಪೊಲೀಸರು ಈ ಸಂಬಂಧ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments