ಚಿಕ್ಕಮಗಳೂರು : ( ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಶಾಂತಿನಗರ ಬಡಾವಣೆಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮನೆಗಳ ನಿರ್ಮಾಣಕ್ಕಾಗಿ ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿ ಭೂಮಿ ಪೂಜೆಯನ್ನು ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ನಗರದಲ್ಲಿ ಜೀವನಕ್ಕಾಗಿ ಶ್ರಮಿಸುತ್ತಿರುವ ವಸತಿರಹಿತರಿಗೆ, ಕೊಳಚೆ ಪ್ರದೇಶದಲ್ಲಿ ವಾಸಮಾಡುತ್ತಿರುವ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಉಚಿತವಾಗಿ 500 ಮನೆಗಳ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆಯ ನಿರ್ಮಾಣಕ್ಕೆ 6.85 ಲಕ್ಷ ರೂ ವೆಚ್ಚವಾಗಲಿದೆ. ಇದರಲ್ಲಿ ಸಬ್ಸಿಡಿಯೂ ಲಭಿಸಲಿದ್ದು ಕಾರ್ಮಿಕ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಕಾರ್ಮಿಕ ಇಲಾಖೆ ವತಿಯಿಂದ ಹಿಂದುಳಿದ ವರ್ಗಕ್ಕೆ ಹಾಗೂ ಅಲ್ಪಸಂಖ್ಯಾತರಿಗೂ ಕೂಡ ಹಣ ದೊರೆಯಲಿದೆ ಎಂದರು. ಈಗಾಗಲೇ 500 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಿದ್ದು ಮುಂದಿನ ಹತ್ತು ತಿಂಗಳೊಳಗೆ ಶೀಘ್ರವಾಗಿ ಮನೆ ನಿರ್ಮಾಣವಾಗಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. 

ಮುಂಬರುವ ದಿನಗಳಲ್ಲಿ ನಗರದಲ್ಲಿ ವಾಸ ಮಾಡುತ್ತಿರುವ ನಿವೇಶನರಹಿತರನ್ನು ಗುರುತಿಸಿ ಅವರಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶಾಸಕ ಸಿ.ಟಿ ರವಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಟಿ ರವಿ ಅವರೊಂದಿಗೆ ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ನಗರಸಭೆಯ ಸದಸ್ಯರು ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.