ಕಡೂರು : (ನ್ಯೂಸ್ ಮಲ್ನಾಡ್ ವರದಿ) ಕಡೂರಿನ ವೃದ್ದೆಯೋರ್ವರು ತಮ್ಮ ಮರಣಾನಂತರ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಹಾಗೂ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರ್ ಚಾರ್ಮಾಡಿ ಘಾಟ್ ನ ಮೊದಲನೇ ತಿರುವಿನಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಾಗರಾಳು ಗ್ರಾಮದ ಸರೋಜಮ್ಮ ಎಂಬ 78 ವರ್ಷ ವಯಸ್ಸಿನ ವೃದ್ದೆ ಅತ್ಯಂತ ಯಶಸ್ವಿಯಾಗಿ ತಮ್ಮ ಜೀವನವನ್ನು ನಡೆಸಿ ಅವರ ಮರಣದ ನಂತರ ಇತರರಬಾಳನ್ನು ಬೆಳಗಬೇಕೆಂಬ ಮಹದಾಸೆಯನ್ನಿಟ್ಟುಕೊಂಡಿದ್ದರು.

ಅಂತೆಯೇ ಶನಿವಾರ ಅವರು ಮರಣ ಹೊಂದಿದ್ದು ಅವರ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬದುಕಿದ್ದಾಗ ಅವರು ಕಂಡಿದ್ದ ಮಹದಾಸೆಯನ್ನು ಮರಣದ ನಂತರ ಈಡೆರಿಸಿಕೊಂಡು ಬೇರೊಬ್ಬರ ಅಂಧಕಾರದ ಜೀವನವನ್ನು ಬೆಳಕಿನೆಡೆಗೆ ಕೊಂಡೊಯ್ದಿದ್ದಾರೆ. 

ಮರಣಹೊಂದಿದ ಸರೋಜಮ್ಮ ಅಜ್ಜಿಯವರ ನೇತ್ರಗಳನ್ನು ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರತಂಡ ಸರೋಜಮ್ಮ ಅವರ ಸ್ವಗ್ರಾಮಕ್ಕೆ ಆಗಮಿಸಿ ಎರಡು ಕಣ್ಣುಗಳನ್ನು ಕೊಂಡೊಯ್ದಿದ್ದಾರೆ. ಈ ಮೂಲಕ ಅಜ್ಜಿಯ ಕಣ್ಣುಗಳು ಬೇರೆಯವರ ದೇಹವನ್ನು ಸೇರಿ ಇನ್ನೂ ಜೀವಂತವಾಗಿ ಪ್ರಪಂಚವನ್ನು ನೋಡುವಂತಾಗಿದೆ. ಬಿ.ಪಿ, ಶುಗರ್ ಸೇರಿದಂತೆ ಯಾವುದೇ ಕಾಯಿಲೆಗಳಿಗೀಡಾಗದೆ ಸದೃಢವಾಗಿದ್ದ ಸರೋಜಮ್ಮ ತಮ್ಮ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾರೆ, ಈ ಮೂಲಕ ಸಮಾಜದ ಅನೇಕರಿಗೆ ಪ್ರೇರಣೆ ಹಾಗೂ ಮಾದರಿಯಾಗಿ ಈ ಲೋಕದಿಂದ ಪಯಣ ಬೆಳೆಸಿದ್ದಾರೆ.