ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಿವರಾತ್ರಿಯ ಅಂಗವಾಗಿ ಅನೇಕ ಕಡೆಗಳ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವುದು ವಾಡಿಕೆ. ಅಂತೆಯೇ ಈ ಬಾರಿಯೂ ಕೂಡ ಮೂಡಿಗೆರೆಯ ಮಾರ್ಗವಾಗಿ ಅನೇಕ ಪಾದಯಾತ್ರಿಗಳು ತೆರಳಿದ್ದಾರೆ ಆ ದಾರಿಯಲ್ಲಿ ತ್ಯಾಜ್ಯದ ರಾಶಿಯೇ ನಿರ್ಮಾಣವಾಗಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಪಕ್ಷ ಸೂಚನೆ ನೀಡಿದಲ್ಲಿ ಮೃತ ಹರ್ಷನ ಕುಟುಂಬಕ್ಕೆ ಸ್ಥಾನ ಬಿಟ್ಟು ಕೊಡಲು ಸಿದ್ಧ : ಕೆ.ಎಸ್ ಈಶ್ವರಪ್ಪ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾರ್ಗವಾಗಿ ಪಾದಯಾತ್ರಿಗಳು ಸಾಗಿದ ಹಾದಿಯಲ್ಲಿ ಕಸದ ರಾಶಿಯೇ ನಿರ್ಮಾಣವಾಗಿದೆ, ಇದನ್ನು ಸಂಗ್ರಹಿಸಿ ಒಂದೆಡೆ ವಿಲೇವಾರಿ ಮಾಡುವುದು ಸವಾಲಿನ ಕಾರ್ಯವಾಗಿದೆ. ರಾಜ್ಯದ ಬೆಂಗಳೂರು,ಹಾಸನ,ಕೋಲಾರ, ಚನ್ನಾರಾಯಪಟ್ಟಣ, ಬೇಲೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಮೂಡಿಗೆರೆ ತಾಲೂಕಿನ ಗೋಣಿಬೀ,ಜನ್ನಾಪುರ, ಜೇನುಬೈಲು, ಮುತ್ತಿಗೆಪುರ, ಹ್ಯಾಂಡ್ ಪೋಸ್ಟ್, ಹೊರಟ್ಟಿ ಚಕ್ಕಮಕ್ಕಿ, ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಭಕ್ತರು ಪಾದಯಾತ್ರೆಯ ಮೂಲಕ ಸಾಗುತ್ತಾರೆ ಆದರೆ ಊಟ ಮಾಡಲು ಬಳಸಿದ ಅನ್ನದ ತಟ್ಟೆಗಳನ್ನೊಳಗೊಂಡಂತೆ,ಕಸವನ್ನು ಅಲ್ಲೇ ಹಾಕಿತೆರಳಿದ್ದಾರೆ ಆ ಸ್ಥಳವನ್ನು ಸ್ವಚ್ಚಗೊಳಿಸುವುದು ಕಸ ವಿಲೇವಾರಿ ಮಾಡುವುದು ಇದೀಗ ಸವಾಲಿನ ಕಾಯಕವಾಗಿದೆ. 

ಸಮರ್ಪಕವಾದ ಶೌಚಾಲಯಗಳು ಇಲ್ಲದೇ ಇರುವುದು ಹೆಚ್ಚಿನ ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಪಾದಯಾತ್ರಿಗಳು ಸಾಗುವ ಮಾರ್ಗದಲ್ಲಿ ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದು ಹೆಚ್ಚಿನ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. 

ಪಾದಯಾತ್ರಿಗಳಿಗೆ ನೀರು, ತಂಪು ಪಾನೀಯ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸುವ ದಾನಿಗಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರದ ಉಳಿವಿಗೆ ಸಹಕಾರ ನೀಡಬೇಕು, ಹಾಗೂ ಗ್ರಾಮ ಪಂಚಾಯತ್ ನ ವ್ಯಾಪ್ತಿಗಳಲ್ಲಿ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣಮಾಡಬೇಕು - ಸಂಜಯ್ ಗೌಡ ಕೊಟ್ಟಿಗೆಹಾರ, ಪರಿಸರ ಪ್ರೇಮಿ

ತನು ಕೊಟ್ಟಿಗೆಹಾರ, ವರದಿಗಾರರು