ಕಳಸ : (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಅಧಿಕಾರಿಗಳು ಗೂಂಡಾವರ್ತನೆ ತೋರಿ ನಮ್ಮ ಜಮೀನಿನ ಬೇಲಿಯನ್ನು ಕಿತ್ತುಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಇಡಕಣಿ ಗ್ರಾಮದ ಸಿಡ್ಲಾರ್ ಮಕ್ಕಿಯ ಪ್ರೀತಂ ಎಂಬುವವರ ಮನೆಯ ಬೇಲಿಯನ್ನು ತಾಲೂಕಿನ ಕಂದಾಯ ಅಧಿಕಾರಿಗಳಾದ ಅಜ್ಜೇಗೌಡ, ಗ್ರಾಮ ಲೆಕ್ಕಾಧಿಕಾರಿ ಕವನ್ ಹಾಗೂ ನಾಡ ಕಚೇರಿ ಸಿಬ್ಬಂದಿಗಳು ಬೇರಾವುದೋ ವ್ಯಕ್ತಿಯ ಕುಮ್ಮಕ್ಕಿನಿಂದ ಕಿರುಕುಳ ನೀಡಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಗೂಂಡಾ ವರ್ತನೆ ತೋರಿ ಬೇಲಿಯನ್ನು ಕಿತ್ತು ಹಾಕಿದ್ದಾರೆ ಎಂದು ರೈತರೋರ್ವರು ಆರೋಪಿಸಿದ್ದಾರೆ.

ದಾಖಲೆ ಹೊಂದಿರುವ ಜಾಗವನ್ನು ತೆರವುಗೊಳಿಸುವುದು ಅಪರಾಧ, ಈ ಕುರಿತು ಸಂತ್ರಸ್ತರು ದೂರು ನೀಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಜರುಗಿಸಲಾಗುವುದು - ಕೆ.ಎನ್ ರಮೇಶ್, ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು

ಕಳೆದ 35 ವರ್ಷಗಳಿಂದ ಮನೆಗೆ ಸಂಬಂಧಪಟ್ಟವರು ಅದೇ ಮನೆಯಲ್ಲಿ ನಿರಂತರವಾಗಿ ವಾಸವಿದ್ದು ಅವರಿಗೆ ಸಂಬಂಧಿಸಿದ ಎರಡು ಎಕರೆ 30 ಗುಂಟೆ ಜಾಗಕ್ಕೆ ಸ್ಕೆಚ್ ಕೂಡ ಹೊಂದಿದ್ದಾರೆ. ಆದರೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಈ ರೀತಿಯಾಗಿ ಗೂಂಡಾ ವರ್ತನೆ ತೋರಿರುವುದು ಸರಿಯಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಬೇಲಿ ತೆರವಿನ ಕುರಿತಾಗಿ ಮನೆಯವರು ಅಧಿಕಾರಿಗಳನ್ನು ಕೇಳಿದಾಗ ಜಿಲ್ಲಾಧಿಕಾರಿಗಳಿಂದ ಬೇಲಿ ತೆರವಿಗೆ ಆದೇಶವಿದೆ ಎಂದು ಸುಳ್ಳು ಹೇಳಿ ಬೇಲಿಯನ್ನು ಕಿತ್ತು ಹಾಕಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಯಾರೋ ಒಡ್ಡಿದ್ದ ಆಮಿಷಕ್ಕೆ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಸುಳ್ಳು ಹೇಳುವುದು, ಅಮಾಯಕರನ್ನು ಹೆದರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅನ್ಯಾಯಕ್ಕೀಡಾದವರು ಪ್ರಶ್ನಿಸಿದ್ದಾರೆ.

ಪ್ರೀತಂ ಅವರ ಮೇಲಿನ ವೈಯಕ್ತಿಕ ದ್ವೇಷಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿ ಯಾವುದೇ ಆದೇಶ ಪ್ರತಿಯನ್ನು ಹೊಂದಿರದೇ ಬೇಲಿ ತೆರವು ಮಾಡಿರುವುದು ಅಪರಾಧ. ಅದರೊಂದಿಗೆ ಬೇಲಿ ತೆಗೆಯಲು ಬಿಡದೆ ಹೋದಲ್ಲಿ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆಂದು ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಅಧಿಕಾರದ ದುರುಪಯೋಗ ಮಾಡಿರುವುದು ಸರಿಯಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.